

ಅರಕಲಗೂಡು: ರೈತರು ತಾವು ಬೆಳೆದ ಉತ್ಪನ್ನಗಳು ಕೆಡದಂತೆ ದಾಸ್ತಾನು ಇಡಲು ಉಗ್ರಾಣ ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎ. ಮಂಜು ಹೇಳಿದರು.
ಪಟ್ಟಣದಲ್ಲಿ ಗೋದಾಮು ನಿಗಮ ಮಂಡಳಿಯ ಗೋದಾಮು ಕಟ್ಟಡಗಳ ಆವರಣದಲ್ಲಿ ಬುಧವಾರ 5 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನವೀಕರಣ ಮತ್ತು ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿ ಹಲವಾರು ರೀತಿಯ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಇವುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸ್ಥಳವಿಲ್ಲದೆ ಪರಿತಪಿಸಿ ಮನಬಂದ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದನ್ನು ಕಂಡು ನಾನು ಸಚಿವನಾಗಿದ್ದ ಸಂದರ್ಭದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ಉಗ್ರಾಣ ಕಟ್ಟಡಗಳನ್ನು ನಿರ್ಮಿಸಲಾಯಿತು. ಆದರೆ ಇಲ್ಲಿಯವರೆಗೆ ಈ ಆವರಣದಲ್ಲಿ ರಸ್ತೆಯಿಲ್ಲದೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಹಿಂದೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಕಾಮಗಾರಿಯನ್ನು ಅಪೂರ್ಣ ಮಾಡಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕಾಮಗಾರಿ ಮಾಡಲಾಗಿರಲಿಲ್ಲ. ಈಗ ಉಳಿಕೆ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಮಾಡಲು ಮುಂದಾಗಿದ್ದೇವೆ ಎಂದರು.
ಹಲವಾರು ವರ್ಷಗಳ ಹಿಂದೆಯೇ ಮಾಜಿ ಸಚಿವ ದಿ.ಎಚ್.ಎನ್. ನಂಜೇಗೌಡರು ಪಟ್ಟಣದಲ್ಲಿ 60 ಎಕರೆ ಭೂಪ್ರದೇಶವನ್ನು ಮೀಸಲಿಟ್ಟಿದ್ದರು. ಇದರಲ್ಲಿ ಕೃಷಿ ಇಲಾಖೆ, ಕೃಷಿ ತರಬೇತಿ ಕೇಂದ್ರ, ಸರ್ಕಾರಿ ಕೈಗಾರಿಕಾ ಕಾಲೇಜು, ಪಶು ವೈದ್ಯಾಧಿಕಾರಿ ಕಚೇರಿ ಹಾಗೂ ಗೋದಾಮುಗಳನ್ನು ನಿರ್ಮಿಸಲಾಗಿದೆ. ಅಂದು ದೂರದೃಷ್ಟಿಯಿಂದ ನಂಜೇಗೌಡರು ನಿಗದಿಗೊಳಿಸಿದ ಆ ಸ್ಥಳ ಇಂದಿಗೆ ಸಮರ್ಪಕವಾಗಿ ಬಳಸಿಕೊಳ್ಳಲಾಯಿತು ಎಂದು ಸ್ಮರಿಸಿದರು. ಮುಖಂಡರಾದ ಕೀರ್ತಿರಾಜು, ವಿಜಯಕುಮಾರ್, ನಿಖಿಲ್ ಕುಮಾರ್ ಇತರರಿದ್ದರು.