

ರಾಮನಗರ : ಹೈನುಗಾರಿಕೆಯನ್ನೇ ನಂಬಿರುವ ರೈತರ ಜೀವನ ಮಟ್ಟ ಉತ್ತುಂಗಕ್ಕೆ ಏರುತ್ತಿದೆ. ಎಂದಿಗೂ ನಿರಾಸೆ ಆಗುವುದಿಲ್ಲ. ಹೈನುಗಾರಿಕೆ ಕಾಮದೇನು ಆಗಿದೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.
ರಾಮನಗರ ತಾಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಸೋಮವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆ ರೈತ ಕುಟುಂಬಗಳಿಗೆ ವರದಾನವಾಗಿದೆ. ಪ್ರತಿ ಕುಟುಂಬದ ಜನರು, ಮಹಿಳೆಯರು, ಯುವಕರು ಹಸು ಸಾಕಾಣಿಕೆಗೆ ಹೆಚ್ಚು ಒತ್ತು ನೀಡಬೇಕು. ಇಂದು ಹೈನುಗಾರಿಕೆಯಲ್ಲೇ ಜೀವನ ಕಟ್ಟಿಕೊಂಡಿರುವ ಕುಟುಂಬಗಳು ಯಶಸ್ವಿ ಜೀವನ ಕಂಡುಕೊಂಡಿವೆ. ರೈತರು ಕೃಷಿ ಜತೆಗೆ ಹೈನುಗಾರಿಕೆ ಮತ್ತು ರೇಷ್ಮೆ ಕ್ಷೇತ್ರಗಳನ್ನು ನಂಬಿ ತಮ್ಮ ಆರ್ಥಿಕ ಮಟ್ಟವನ್ನು ವೃದ್ಧಿಸಿಕೊಂಡು ಜೀವನ ನಡೆಸುತ್ತಿರುವುದು ಸಂತಸ ತಂದಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಹೊಂದಾಣಿಕೆ ಇದ್ದರೆ ಆಡಳಿತ ಮಂಡಳಿಗೆ ಸಂಘ ಬೆಳೆಸುವ ಇಚ್ಚಾಶಕ್ತಿಯಿದ್ದರೆ ಎನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕನ್ನಮಂಗಲ ಹಾಲಿನ ಡೇರಿ ಕಟ್ಟಡವೇ ಸಾಕ್ಷಿಯಾಗಿದೆ. ಇದು ಇತರ ಸಂಘಗಳಿಗೆ ಮಾದರಿಯಾಗುವಂತಿದೆ. ಬಡವರಿಗೆ ಹಸು ಸಾಕಣೆಗೆ ಇಲಾಖೆಯಿಂದ ನೆರವು ನೀಡುವ ಜತೆಗೆ ಸಂಘಕ್ಕೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 5 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಣ್ವ ಜಲಾಶಯ ನಿರ್ಮಾಣ ಸಮಯದಲ್ಲಿ ಮುಳುಗಡೆಯಾದ ರೈತರಿಗೆ ನೀಡಲಾದ ಭೂಮಿಗೆ ಹಕ್ಕುಪತ್ರ ಕೊಡಿಸಲು ಶೀಘ್ರ ಮುಕ್ತಿ ಸಿಗುವ ಕಾಲ ಬರುತ್ತಿದೆ. ಹೊಸ ಚಿಂತನೆ ನಡೆಸಿ ನವ ರಾಮನಗರ ಕಟ್ಟೋಣ ಎಂದರು.
ಜಿಲ್ಲಾ ಗ್ಯಾರಂಟಿ ಸಮಿತಿ ಜಿಲಾಧ್ಯಕ್ಷ ಕೆ. ರಾಜು ಮಾತನಾಡಿದರು.
ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್‌ಗೌಡ, ಸದಸ್ಯ ಎಂ. ರಾಜು, ಬಮುಲ್ ನಿರ್ದೇಶಕ ಹರೀಶ್, ಹಾರೋಹಳ್ಳಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್, ರಾಮನಗರ ಶಿಬಿರ ವ್ಯವಸ್ಥಾಪಕ ಡಾ. ಗಣೇಶ್, ವಿಸ್ತರಣಾಧಿಕಾರಿಗಳಾದ ಕವಿತಾ, ಉಮೇಶ್, ಸಂಘದ ಅಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷೆ ಮಮತಾ, ನಿರ್ದೇಶಕರಾದ ಸಣ್ಣಪ್ಪ, ಪುಟ್ಟಸ್ವಾಮಯ್ಯ, ಕೆಂಪಲಿಂಗಯ್ಯ, ನರಸಿಂಹಯ್ಯ ಮರಿಸ್ವಾಮಯ್ಯ, ಗುರುರಾಜು, ಶಂಭುಲಿಂಗಯ್ಯ, ಪ್ರಭಾವತಿ, ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ಗಾಂಧಿನಾಗ, ಕೃಷ್ಣೇಗೌಡ, ಮಹದೇವ, ಶೇಖರ್, ಕೃಷ್ಣಪ್ಪ, ಹಾಲು ಪರೀಕ್ಷಕ ಮಂಜು ಇದ್ದರು.
650 ಲೀಟರ್ ಹಾಲು ಸಂಗ್ರಹ
ಕಳೆದ 7 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘದಲ್ಲಿ 53 ಹಾಲು ಉತ್ಪಾದಕರಿದ್ದು, ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಪ್ರತಿನಿತ್ಯ 650 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕಡಿಮೆ ಅವಧಿಯಲ್ಲಿ 17.50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚು ಇದ್ದು, ರಾಜ್ಯದಲ್ಲಿ ವರ್ಷಕ್ಕೆ 1600 ಕೋಟಿ ರೂ. ಸಹಾಯ ಧನ, ಹಾಲು ಉತ್ಪಾದಕರ ಕೈ ಸೇರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ 10 ಸಾವಿರ ಕೋಟಿ ರೂ. ರೈತರಿಗೆ ಸೇರಿದೆ. ಒಂದು ಬಾಟೆಲ್ ನೀರಿನ ಬೆಲೆ 40 ರೂ ಇದೆ. ಆದರೆ, ರೈತರ ಹಾಲಿನ ಬೆಲೆ ಜಾಸ್ತಿ ಮಾಡಿದರೆ ವಿರೋಧ ಪಕ್ಷದವರು ಹೋರಾಟ ಮಾಡುತ್ತಾರೆ ಎಂದು ಬಮುಲ್ ನಿರ್ದೇಶಕ ಪಿ. ನಾಗರಾಜು ಹೇಳಿದರು.