ರೈತರಿಗೆ ಬೇಡವಾದ ಔಷಧ ಖರೀದಿ

10-hvr-03
Published on

ಹಾವೇರಿ: ಕೃಷಿ ಇಲಾಖೆಯವರು ಬೇರೆ ಜಿಲ್ಲೆಯಲ್ಲಿ ರೈತರಿಗೆ ಸಬ್ಸಿಡಿಯಲ್ಲಿ ವಿತರಿಸಲು ಪ್ರತಿಷ್ಠಿತ ಕಂಪನಿಯ ಔಷಧಿ ತರುತ್ತಾರೆ. ಇಲ್ಲೇಕೆ ಇಲ್ಲ. ಬೇಡಿಕೆಯಿಲ್ಲದ 225ರೂ.ಗಳ 50ಕೆಜಿ ಬ್ಯಾಗ್ ಸಾವಯವ ಗೊಬ್ಬರ ತಂದಿದ್ದೀರಿ ಅದನ್ನು ರೈತರು ಖರೀದಿಸುತ್ತಲೇ ಇಲ್ಲ. ರೈತರಿಗೆ ಬೇಡವಾದ ಔಷಧಿಗಳು ನಿಮಗೇಕೆ ಬೇಕು…!

ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರು ಕೃಷಿ ಇಲಾಖೆ ಅಧಿಕಾರಿ ಕುಡುಪಲಿ ಅವರನ್ನು ತರಾಟೆ ತೆಗೆದುಕೊಂಡರು.

ಸದಸ್ಯ ಸತೀಶ ಸಂದಿಮನಿ ಮಾತನಾಡಿ, ಜಿಲ್ಲೆಯಲ್ಲಿ ಶೇ. 90ರಷ್ಟು ರೈತರಿದ್ದು, ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಇಲ್ಲಿನ ರೈತರು ಹೆಚ್ಚಾಗಿ ಉಪಯೋಗಿಸುವ ಪ್ರತಿಷ್ಠಿತ ಕಂಪನಿಗಳ ಔಷಧಿಗಳಿಗೆ ನೀವು ಸಬ್ಸಿಡಿ ಕೊಡುವುದಿಲ್ಲ. ಹೀಗಾಗಿ ರೈತರು ದುಬಾರಿ ಬೆಲೆಕೊಟ್ಟು ಅವುಗಳನ್ನು ಖರೀದಿಸುವಂತಾಗಿದೆ. ರೈತರ ಇಚ್ಛೆಯನುಸಾರ ಸರ್ಕಾರದ ಸಬ್ಸಿಡಿ ನೀಡಿ. ನಿಮ್ಮ ಇಚ್ಛೆ ಇದರಲ್ಲಿ ಏಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹಾಯಕ ಕೃಷಿ ನಿರ್ದೇಶಕ ಕುಡುಪಲಿ ಮಾತನಾಡಿ, ಸಬ್ಸಿಡಿ ಔಷಧಿ ಖರೀದಿ ನನ್ನ ವ್ಯಾಪ್ತಿಯಲ್ಲಿ ಇಲ್ಲ. ಜಂಟಿ ಕೃಷಿ ನಿರ್ದೇಶಕರು ಸರ್ಕಾರದ ನಿಯಮದಂತೆ ನೀಡಿದ ಔಷಧಿಗಳಿಗೆ ನಾವು ಸಬ್ಸಿಡಿ ಕೊಡುತ್ತೇವೆ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಕೃಷಿ ಸಚಿವರು ನಮ್ಮ ಜಿಲ್ಲೆಯವರೇ ಇದ್ದು, ಇದನ್ನು ಅವರ ಗಮನಕ್ಕೆ ತರೋಣ. ಕೃಷಿ ಇಲಾಖೆ ಬೆಳೆವಿಮೆ ಪರಿಹಾರ ಬಾಕಿಯಿದೆ ಅದನ್ನು ತಿಳಿಸೋಣ ಎಂದು ತೀರ್ವನಿಸಿದರು.

ಸದಸ್ಯ ಮಾಲತೇಶ ಬನ್ನಿಮಟ್ಟಿ, ಮಾತನಾಡಿ, ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಏನಾಗಿದೆ. ಹಿಂದಿನ ಸಭೆಯಲ್ಲಿ ಸ್ಥಗಿತಗೊಂಡ ಘಟಕಗಳ ದುರಸ್ತಿಗೆ ಸೂಚಿಸಲಾಗಿತ್ತು. ಇನ್ನು ಯಾವುದೇ ಕ್ರಮ ಆಗಿಲ್ಲ ಎಂದರು. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಇಇ ಉಮೇಶ ಮಾತನಾಡಿ, ಸದ್ಯ ಸರ್ಕಾರದಿಂದ ಒಂದು ಘಟಕಕ್ಕೆ 3ಸಾವಿರ ಮೆಂಟೆನೆನ್ಸ್​ಗೆ ಅನುದಾನ ಬಿಡುಗಡೆಯಾಗಿದೆ. ಕೆಲವನ್ನು ದುರಸ್ತಿಗೊಳಿಸಲಾಗಿದೆ ಎಂದರು.

ಹಾವನೂರ ಬಳಿ ಅರಣ್ಯ ಇಲಾಖೆ 110ಎಕರೆ ಖಾಲಿ ಜಾಗೆಯಿದೆ. ಮೊರಾರ್ಜಿ, ರಾಣಿ ಚೆನ್ನಮ್ಮ ಶಾಲೆಗೆ 10 ಎಕರೆ ಜಮೀನು ನೀಡಬೇಕು ಎಂದು ಮಾಲತೇಶ ಬನ್ನಿಮಟ್ಟಿ ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್​ಎಫ್​ಒ ಉಮರ್ ಭಾಷಾ, ಕಂದಾಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಬೇಕು ಎಂದರು. ಇದಕ್ಕೆ ಕೆರಳಿದ ಸದಸ್ಯರು, ಅಲ್ಲಿ ಯಾವುದೇ ಅರಣ್ಯವಿಲ್ಲ. ನೀವು ಅದನ್ನು ಬರೆದು ಸರ್ಕಾರಕ್ಕೆ ಕಳಿಸಿ, ಶಾಸಕರು ಕಂದಾಯ ಇಲಾಖೆಯಿಂದ ಅನುಮತಿ ಕೊಡಿಸುತ್ತಾರೆ ಎಂದರು.

ನೆರೆ, ಅತಿವೃಷ್ಟಿ ಕಾಮಗಾರಿ ಎಷ್ಟಾಗಿವೆ. ಕಾಮಗಾರಿ ಮುಕ್ತಾಯ ವರದಿಯನ್ನೇಕೆ ಸಲ್ಲಿಸಿಲ್ಲ. ಲೋಕೋಪಯೋಗಿ ಇಲಾಖೆ 2.50ಕೋಟಿ ಕಾಮಗಾರಿ ಮುಗಿದಿವೆ. ಕಾಮಗಾರಿ ಮುಗಿದ ಕುರಿತು ಸ್ಥಳೀಯ ತಾಪಂ, ಜಿಪಂ, ಗ್ರಾಪಂ ಸದಸ್ಯರ ಷರಾದೊಂದಿಗೆ ಮುಂದಿನ ಸಭೆಗೆ ಮಾಹಿತಿ ಕೊಡಬೇಕು. ಅನೇಕ ಕಡೆಗಳಲ್ಲಿ ಕಳಪೆ ಕಾಮಗಾರಿಯಾಗಿರುವ ದೂರುಗಳಿವೆ. ಶಾಲಾ ಕಟ್ಟಡದ ಕಾಮಗಾರಿಗಳನ್ನು ಶಾಲೆಯ ಮುಖ್ಯಶಿಕ್ಷಕರು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ ನಂತರವೇ ಅನುದಾನ ಬಿಡುಗಡೆಗೊಳಿಸಬೇಕು ಎಂದು ಸತೀಶ ಸಂದಿಮನಿ ದೂರಿದರು.

ಶಾಲಾ 7ನೇ ತರಗತಿ ಪಬ್ಲಿಕ್ ಪರೀಕ್ಷೆ ಯಾವ ರೀತಿ ನಡೆಯುತ್ತವೆ ಎಂಬ ಮಾಹಿತಿ ಪಾಲಕರಿಗೆ ಕೊಟ್ಟಿಲ್ಲ. ಅನೇಕರು ಗೊಂದಲದಲ್ಲಿದ್ದಾರೆ ಎಂದು ಸದಸ್ಯರು ಬಿಇಒ ಅವರನ್ನು ಪ್ರಶ್ನಿಸಿದರು. ಸರ್ಕಾರದ ಸೂಚನೆಯಂತೆ ಈ ಸಾರಿ ಪ್ರಾಯೋಗಿಕವಾಗಿ ಪಬ್ಲಿಕ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಬಿಇಒ ಎಂ.ಎಚ್. ಪಾಟೀಲ ತಿಳಿಸಿದರು.

ಬಿಸಿಯೂಟ ಯೋಜನೆಯಲ್ಲಿ ಇನ್ಮುಂದೆ ಕಡ್ಡಾಯವಾಗಿ ಶಾಲಾ ಆವರಣದಲ್ಲಿಯೇ ಕೈತೋಟ ಮಾಡಬೇಕು. ಅಲ್ಲಿನ ತರಕಾರಿಯನ್ನೇ ಬಿಸಿಯೂಟಕ್ಕೆ ಬಳಸುವಂತೆ ಕಾರ್ಯಕರ್ತೆಯರಿಗೆ ಸೂಚಿಸಿ ಎಂದು ಸದಸ್ಯರು ಬಿಇಒಗೆ ತಿಳಿಸಿದರು.

ತೋಟಗಾರಿಕೆ ಇಲಾಖೆ ಹನಿ ನೀರಾವರಿ ಕಾಮಗಾರಿ ಆದೇಶ ಪಡೆದವರು 20ದಿನಗಳಲ್ಲಿ ಕೆಲಸ ಮಾಡದೇ ಇದ್ದರೇ ಅವರ ಆದೇಶಗಳನ್ನೇ ಸಾಪ್ಟವೇರ್​ನಲ್ಲಿ ಕ್ಲೋಸ್ ಮಾಡಲಾಗಿದೆ. ಕೂಡಲೇ ಅವರಿಗೆ ಹೊಸ ಆದೇಶ ಕೊಡುವಂತೆ ಸದಸ್ಯರು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಕಮಲವ್ವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುವರ್ಣಾ ಸುಕಳಿ, ಸದಸ್ಯರಾದ ವಿರುಪಾಕ್ಷಪ್ಪ ಹುಲ್ಲೂರ, ಎಂ.ಎಂ. ವಗ್ಗಣ್ಣನವರ, ಕರಿಯಪ್ಪ ಉಂಡಿ, ಪ್ರಕಾಶ ಗುಂಡಜ್ಜನವರ, ಇಒ ಡಿ. ಬಸವರಾಜ ಇತರರಿದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net