

ಕೆ.ಆರ್.ಪೇಟೆ: ಉಪಕಸುಬುಗಳಲ್ಲಿ ಹೈನುಗಾರಿಕೆ ರೈತರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವನ್ನು ಮಾಡುತ್ತಿದ್ದು, ವ್ಯವಸಾಯದ ಜತೆಗೆ ಶೇ.75ರಷ್ಟು ಕೃಷಿಕರು ಪಶುಪಾಲನೆ ಅವಲಂಬಿಸಿದ್ದಾರೆ ಎಂದು ಮನ್ಮುಲ್ ನಿರ್ದೇಶಕ ಕೆ.ಡಾಲು ರವಿ ಹೇಳಿದರು.
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಜೈನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತರು ಕೃಷಿಯ ಜತೆಗೆ ಹೈನುಗಾರಿಕೆ, ರೇಷ್ಮೆ, ಕೋಳಿ, ಮೇಕೆ ಸಾಕಣೆ ಸೇರಿದಂತೆ ವಿವಿಧ ಉಪಕಸುಬುಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಸುತ್ತಿದ್ದಾರೆ ಎಂದು ತಿಳಿಸಿದರು.
ಪಶುಪಾಲನೆ ರೈತರಿಗೆ ಅತಿಹೆಚ್ಚು ಆದಾಯ ನೀಡುತ್ತಿದ್ದು ಇದರ ಪರಿಣಾಮವಾಗಿ ತಾಲೂಕಿನಲ್ಲಿ ಅತಿಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ರೈತರು ತಮ್ಮ ಗ್ರಾಮದಲ್ಲಿರುವ ಸಹಕಾರ ಸಂಘಗಳ ಏಳಿಗೆಗೆ ಶ್ರಮಿಸಬೇಕು. ಪರಿಶುದ್ಧ ಹಾಲನ್ನು ಸಂಘಕ್ಕೆ ನೀಡುವ ಮೂಲಕ ಅಕ ಬೆಲೆ ಪಡೆಯಬೇಕು. ಆ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ತನ್ನದೇ ಆದ ಕಾಣಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಹೆಚ್ಚಿನ ಪ್ರಮಾಣದ ರೈತರು ತಮ್ಮ ಪರಿಶ್ರಮದಿಂದ ಹಗಲು- ಇರುಳು ಎನ್ನದೆ ಹೈನೋದ್ಯಮವನ್ನು ನಂಬಿ ಕೆಲಸ ಮಾಡುತ್ತಿದ್ದಾರೆ. ಸಂಘವು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ. ಸಂಘ ಲಾಭದತ್ತ ಮುನ್ನಡೆಯಲಿ ಮಹಾಮಂಡಳದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಂಘಕ್ಕೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ನಾಗೇಶ್, ನಿರ್ದೇಶಕರಾದ ಜಲೇಂದ್ರ, ಪ್ರಭಾಕರ, ಜಯರಾಮೇಗೌಡ, ಸತೀಶ್, ಮುಕುಂದ, ಜಯಶೀಲ, ಗಾಯತ್ರಿ, ಕಾರ್ಯದರ್ಶಿ ಕೆ.ವೀಣಾ, ಸಿಬ್ಬಂದಿ ರಮೇಶ್, ಚಂದ್ರು ಇದ್ದರು.