

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ತರಕಾರಿ ಬೆಳೆದ ತಾಲೂಕಿನ ಅಕ್ಕುಂಜಿ ಗೋಳಗೋಡಿನ ರೈತರೇ ಸ್ವತಃ ಮನೆ ಮನೆಗೆ ತೆರಳಿ ವ್ಯಾಪಾರ ಮಾಡುವುದಕ್ಕೆ ತಹಸೀಲ್ದಾರ್ ಮಂಜುಳಾ ಭಜಂತ್ರಿ ಅವಕಾಶ ನೀಡಿದ್ದರಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಗೋಳಗೋಡಿನ ಈಶ್ವರ ಕೆರೆಯಾ ನಾಯ್ಕ, ಬಸವಣ್ಣಿ ಕೆರೆಯಾ ನಾಯ್ಕ, ತಿಮ್ಮ ನಾಯ್ಕ, ಆನಂದ ನಾಯ್ಕ, ಸೋಮಶೇಖರ ನಾಯ್ಕ, ತಿಮ್ಮಣ್ಣ ನಾಯ್ಕ ಮತ್ತಿತರರು ಅನೇಕ ವರ್ಷದಿಂದ 25ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಬಗೆಯ ತರಕಾರಿ ಬೆಳೆಯುತ್ತಿದ್ದಾರೆ. ಆದರೆ, ತರಕಾರಿಯನ್ನು ಮಧ್ಯವರ್ತಿಗಳಿಗೆ ನೀಡಿ ಅವರು ನೀಡುವ ಹಣ ಪಡೆದುಕೊಳ್ಳುತ್ತಿದ್ದರು.
ಇದನ್ನರಿತ ಕೃಷಿ ಇಲಾಖೆ ಅಧಿಕಾರಿ ಪ್ರಶಾಂತ ಜಿ.ಎಸ್. ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್. ಗೌಡರ್ ಅವರು ತಹಸೀಲ್ದಾರ್ ಅವರ ಗಮನಕ್ಕೆ ತಂದಾಗ, ‘ರೈತರಿಗೆ ನ್ಯಾಯ ನೀಡುವುದು ನಮ್ಮ ಕರ್ತವ್ಯ’ ಎಂದು ಸ್ವತಃ ತಹಸೀಲ್ದಾರ್ ಮಂಜುಳಾ ಭಜಂತ್ರಿ ಭಾನುವಾರ ಗೋಳಗೋಡಗೆ ತೆರಳಿ ರೈತರು ಬೆಳೆದ ತರಕಾರಿಗಳನ್ನು ವೀಕ್ಷಿಸಿ ರೈತರೊಂದಿಗೆ ಚರ್ಚೆ ನಡೆಸಿದರು.
ಕರೊನಾ ಸಂಕಟ ನಮಗೂ ಉಂಟಾಗಿರುವುದರಿಂದ ತರಕಾರಿ ಬೆಳೆಯುವುದು ಕಷ್ಟವಾಗಿದೆ. ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಇದ್ದರೆ ಜೀವನ ನಡೆಸಬಹುದು. ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿದ್ದು ಸಂತಸವಾಗಿದೆ ಎಂದು ಈಶ್ವರ ಕೆರೆಯಾ ನಾಯ್ಕ ಹೇಳಿದರು.
ಮನವಿ: ಗೋಳಗೋಡಿನ ರೈತರು ತಹಸೀಲ್ದಾರರಿಗೆ ಸ್ಥಳದಲ್ಲಿಯೇ ಮನವಿ ನೀಡಿ ನಮಗೆ ಸಿದ್ದಾಪುರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತರಕಾರಿ ಮಾರಾಟ ಮಾಡುವುದಕ್ಕೆ ಅವಕಾಶ ನೀಡಬೇಕು ಹಾಗೂ ಸ್ಥಳೀಯ ಹಳ್ಳಕ್ಕೆ ಬಾಂದಾರ ನಿರ್ವಿುಸಿಕೊಡುವಂತೆ ಮನವಿ ನೀಡಿದರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಅವರು ತರಕಾರಿ ಮಾರಾಟ ಮಾಡುವುದಕ್ಕೆ ಎರಡು ವಾಹನಕ್ಕೆ ಪರವಾನಗಿ ನೀಡಲಾಗುವುದು. ಬಾಂದಾರದ ಕುರಿತು ನಂತರ ವಿಚಾರಿಸೋಣ ಎಂದು ತಿಳಿಸಿದರು.
ದಿನವಿಡೀ ಬಿಸಿಲಿನಲ್ಲಿ ದುಡಿದು ತರಕಾರಿ ಬೆಳೆಯುವ ಬೆಳೆಗಾರರಿಗೆ ಸರಿಯಾದ ಬೆಲೆ ಸಿಗಬೇಕು. ಮಧ್ಯವರ್ತಿಗಳು ಸಹ ರೈತರ ಕುರಿತು ಯೋಚಿಸಬೇಕು. ಲಾಕ್ಡೌನ್ನಿಂದ ಯಾರಿಗೂ ತೊಂದರೆ ಆಗಬಾರದು. | ಸಿ.ಎಸ್.ಗೌಡರ್, ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದಾಪುರ