ರೈತರಾದ ವಿದ್ಯಾರ್ಥಿಗಳು

4sirsi1a
Published on

ರಾಜೇಂದ್ರ ಶಿಂಗನಮನೆ ಶಿರಸಿ

ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳೆಲ್ಲ ಇದೀಗ ಸಂಪೂರ್ಣ ರೈತರಾಗಿ ಬದಲಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮೈಮುರಿದು ದುಡಿದು ಆದಾಯ ಗಳಿಸುತ್ತಿದ್ದಾರೆ.

ಹೌದು, ಇಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕಾ ಕಾರ್ಯಕ್ರಮದಡಿ ರೈತರಂತೆ ಮಣ್ಣಿನ ಕೆಲಸ ಮಾಡುತ್ತಾ, ಹತ್ತಾರು ಗುಂಟೆ ಪ್ರದೇಶದಲ್ಲಿ ವೈವಿಧ್ಯಮಯ ತರಕಾರಿಗಳು, ಸೊಪ್ಪಿನ ಬೆಳೆ ಜತೆ ಅಲಂಕಾರಿಕ ಗಿಡಗಳನ್ನು ಬೆಳೆದು ಆದಾಯ ಗಳಿಸುತ್ತಿದ್ದಾರೆ.

ಇನ್ನೇನು ಪದವಿ ಪೂರೈಸಿ ವಿವಿಧ ಕ್ಷೇತ್ರಗಳತ್ತ ಹೆಜ್ಜೆ ಹಾಕಲು ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳಿಗೆ ಜೀವನಾನುಭವದ ಜತೆ ಸ್ವಾವಲಂಬನೆಯ ಪಾಠವನ್ನು ಮಹಾವಿದ್ಯಾಲಯದಲ್ಲಿ ಮಾಡಲಾಗುತ್ತಿದೆ. ಮೂರು ವರ್ಷಗಳ ಕಾಲ ನಿರಂತರ ಓದಿಗೆ ಸೀಮಿತವಾಗಿದ್ದ ವಿದ್ಯಾರ್ಥಿಗಳಿಗೆ ಸಂರಕ್ಷಿತ ಬೇಸಾಯ ಕ್ರಮಗಳ ಬೋಧನೆ ಮಾಡಲಾಗುತ್ತದೆ.

ವೈವಿಧ್ಯಮಯ ಬೆಳೆ: 4 ಗುಂಟೆ ಪ್ರದೇಶದಲ್ಲಿ ಯುರೋಪಿಯನ್ ಸವತೆಯನ್ನು ಸಮೃದ್ಧವಾಗಿ ಬೆಳೆಯಲಾಗಿದೆ. 1 ಗುಂಟೆಯಲ್ಲಿ ಪ್ರಕೋಲಿ, ರೆಡ್ ಕ್ಯಾಬೇಜ್ ಬೆಳೆಯಲಾಗಿದೆ. 5 ಗುಂಟೆಯಲ್ಲಿ ಮೆಂತೆ, ಹರವೆ, ಪಾಲಕ್, ಸಬ್ಬಸಗಿ, ಕೋತಂಬರಿ ಸೊಪ್ಪುಗಳು, 10 ಗುಂಟೆಯಲ್ಲಿ ಕ್ಯಾಪ್ಸಿಕಂ, ಬದನೆ, ಹಸಿ ಮೆಣಸು ಬೆಳೆಯಲಾಗಿದೆ. ವಿಶೇಷ ಎಂದರೆ ಇವೆಲ್ಲ ಕಾರ್ಯವನ್ನೂ ನಾಟಿಯಿಂದ ಹಿಡಿದು ಕೊಯ್ಲಿನ ತನಕ ವಿದ್ಯಾರ್ಥಿಗಳೇ ಮಾಡಿದ್ದಾರೆ. ಇದರಿಂದಾಗಿ ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದ ತಳಹಂತದ ಹಾಗೂ ರೈತ ಬೇಸಾಯದ ಪರಿಚಯ ವಿದ್ಯಾರ್ಥಿಗಳಿಗೆ ಆಗುತ್ತಿದೆ.

ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವ ಸವತೆಯನ್ನು ಮಹಾವಿದ್ಯಾಲದ 200 ಮಕ್ಕಳ ಸಾಮರ್ಥ್ಯದ ವಸತಿ ನಿಲಯಕ್ಕೆ, ಹಾಪ್​ಕಾಮ್್ಸ, ಟಿಎಸ್​ಎಸ್​ನಂತಹ ಸಂಸ್ಥೆಗಳಿಗೆ ಮಾರಿದರೆ, ಉಳಿದವನ್ನು ಮಹಾವಿದ್ಯಾಲಯದ ಎದುರಿನ ರಸ್ತೆ ಬದಿ ಮಳಿಗೆಯಲ್ಲಿ ವಿದ್ಯಾರ್ಥಿಗಳೇ ಸ್ವತಃ ಮಾರುತ್ತಿದ್ದಾರೆ. ಪಾಮ್್ಸ, ಡೈಫಿನ್ ಬೇಕಿಯಾ, ಅಂಥೋರಿಯಂ, ಆರ್ಕಿಡ್, ಮ್ಯಾರಿಗೋಲ್ಡ್, ಕ್ರೊಸಾಂಡ್ರಾ ಮುಂತಾದ ಅಲಂಕಾರಿಕ ಗಿಡಗನ್ನು ಬೆಳೆದು ಮಾರುತ್ತಿದ್ದಾರೆ. ಇದರಿಂದ ವ್ಯಾವಹಾರಿಕ ಜ್ಞಾನ ಕೂಡ ಹೆಚ್ಚುತ್ತಿದೆ ಎಂಬುದು ಉಪನ್ಯಾಸಕ ವರ್ಗದ ಅಭಿಪ್ರಾಯ.

ಪುಸ್ತಕದಲ್ಲಿ ಓದುವುದಕ್ಕೂ ಕ್ಷೇತ್ರದಲ್ಲಿನ ವಾಸ್ತವಿಕತೆಗೂ ವ್ಯತ್ಯಾಸವಿರುವುದು ತಿಳಿಯುತ್ತದೆ. ಜತೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವೂ ಬೆಳೆಯುತ್ತದೆ. ರೈತರ ಸಮಸ್ಯೆ ತಿಳಿಯುವ ಜತೆ ಅದರ ಪರಿಹಾರೋಪಾಯಗಳು, ಮಾರುಕಟ್ಟೆಯ ಸಮಗ್ರ ಮಾಹಿತಿ ತಿಳಿಯಬಹುದು. ತರಕಾರಿ ಬೆಳೆಯಿಂದ ಬರುವ ಆದಾಯದಲ್ಲಿ ಶೇ. 80ರಷ್ಟನ್ನು ವಿದ್ಯಾರ್ಥಿಗಳು ಬಳಸುತ್ತಿದ್ದು, ಹಲವರ ಪುಸ್ತಕ ಖರೀದಿಗೆ ಅನುಕೂಲವಾಗಿದೆ. | ಮಿಥುನ್ ಚಕ್ರವರ್ತಿ ವಿದ್ಯಾರ್ಥಿಪದವಿ ಕಲಿತವರೆಲ್ಲ ಸರ್ಕಾರಿ ನೌಕರರಾಗಲು ಸಾಧ್ಯವಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗದಂತೆ ಸ್ವಾವಲಂಬಿಯಾಗುವ ಜತೆ ಕ್ಷೇತ್ರದ ಪರಿಚಯವನ್ನು ಈಗಲೇ ಮಾಡಿಕೊಡಲು ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ. ಇಲ್ಲಿ ಕ್ಷೇತ್ರದ ಸಂಪೂರ್ಣ ಪರಿಚಯವಾಗಲಿದ್ದು, ಇದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. | ಪೊ›. ಶಿವಾನಂದ ಹೊಂಗಲ್ ಮಾರ್ಗದರ್ಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net