

ಬಾಗಲಕೋಟೆ: ಜಿಲ್ಲೆಯಲ್ಲಿ ವಕ್ ಆಸ್ತಿ ಎಂದು ರೈತರಿಗೆ ನೋಟಿಸ್ ಹೋಗಿದ್ದ ನಿಜ. ಆದರೆ, ರೈತರಿಗೆ ಟ್ರಿಬ್ಯುನಲ್ ನಲ್ಲಿ ಆದೇಶವಾಗಿದೆ. ಭೂ ನ್ಯಾಯ ಮಂಡಳಿಯಿಂದ ಜಮೀನು ಹಂಚಿಕೆ ಆಗಿದ್ದರೆ ಅದನ್ನು ಸುಪ್ರೀಂ ಕೋರ್ಟ್ಗೆ ಹೋದರೂ ಅದು ಮತ್ತೆ ಮಂಡಳಿಗೆ ಬರುತ್ತದೆ. ಹೀಗಾಗಿ ನಮ್ಮ ರೈತರನ್ನು ಒಕ್ಕಲೆಬ್ಬಿಸುವುದು ಹಾಗೂ ಅವರಿಗೆ ತೊಂದರೆ ಕೊಡುವುದು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟವಾಗಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಧ್ವಜಾರೋಹಣದ ಬಳಿಕ ಸುದ್ದಿಗೋಷ್ಠಿಯಲ್ಲಿ ತಮಗೆ ಎದುರಾದ ಪ್ರಶ್ನೆಗೆ ಉತ್ತರಿಸಿದರು.
ವಕ್ ಬೋರ್ಡ್ ನವರು ತಮ್ಮ ಆಸ್ತಿ ರಕ್ಷಣೆ ಮಾಡಲು ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ಆದರೆ, ಆ ಜಮೀನುಗಳನ್ನು ಭೂ ನ್ಯಾಯ ಮಂಡಳಿಯಲ್ಲಿ ಮಂಜೂರು ಮಾಡಲಾಗಿದೆ. ಹೀಗಾಗಿ ಟ್ರಿಬ್ಯುನಲ್ ಆದೇಶವೇ ಅಂತಿಮ. ರಾಜ್ಯದಲ್ಲಿ ಟ್ರಿಬ್ಯುನಲ್ ಈಸ್ ಎಂಪಾವರ್ ಎಂದರು.
ಯಾವುದಾದರೂ ಪ್ರಕ್ರಿಯೆಯಲ್ಲಿ ಲೋಪ ಆಗಿದ್ದರೆ ಅದನ್ನು ಸರಿ ಪಡಿಸಿ ಎಂದು ನ್ಯಾಯಾಲಯ ಹೇಳುತ್ತದೆ ವಿನಃ ಟ್ರಿಬ್ಯುನಲ್ ಆದೇಶ ತಪ್ಪು ಎಂದು ಬಂದಿಲ್ಲ. ಇದು ರೈತರ ಆಸ್ತಿ. ನೋ ಕೇಸ್. ರೈತರು ಉಳಿಮೆ ಮಾಡುತ್ತಿದ್ದ ಜಮೀನು ಹಿಂಪಡೆದು ಅವರನ್ನು ಒಕ್ಕಲೆಬ್ಬಿಸುವ ಕೆಲಸ ಆಗಲ್ಲ. ಪಹಣೆಯಲ್ಲಿ ವಕ್ ಹೆಸರು ತೆಗೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ವಕ್ ವಿಚಾರವಾಗಿ ವಿಪಕ್ಷಗಳು ಇದನ್ನು ರಾಜಕೀಯವಾಗಿ ಬಳಕೆ ಮಾಡುವುದು ತಪ್ಪು. ಸರ್ಕಾರ ರೈತರ ಪರವಾಗಿದೆ. ವಕ್ ನವರಿಗೆ ಎಲ್ಲೋ ಒಂದು ಕಡೆಗೆ ತಮ್ಮ ಆಸ್ತಿ ಎನ್ನುವ ಭಾವನೆ ಇದೆ. ಆದರೆ, ಟ್ರಿಬ್ಯುನಲ್ ಆದೇಶವೇ ಅಂತಿಮವಾಗಿರುವುದರಿಂದ ರೈತರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಈ ಸಲ ರನ್ನ, ಚಾಲುಕ್ಯ ಉತ್ಸವ :
ಜಿಲ್ಲೆಯಲ್ಲಿ ಚಾಲುಕ್ಯ ಉತ್ಸವ ಹಾಗೂ ರನ್ನ ಉತ್ಸವ ನಡೆಯುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದು, ಈ ಸಲ ಮಳೆ, ಬೆಳೆ ಎಲ್ಲವೂ ಚನ್ನಾಗಿ ಇರುವುದರಿಂದ ಚಾಲುಕ್ಯ ಮತ್ತು ರನ್ನ ಉತ್ಸವವನ್ನು ಖಂಡಿತ ನಡೆಸುತ್ತೇವೆ. ಯಾವಾಗ ನಡೆಸಬೇಕು ಎಂದು ದಿನಾಂಕ ನಿಗದಿ ಮಾಡುತ್ತೇವೆ ಎಂದು ಹೇಳಿದರು.