

ಸವದತ್ತಿ: ಬೆಳಗಾವಿ ಅಧಿವೇಶನದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯವಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾಧ್ಯಕ್ಷ ಸುರೇಶ ಸಂಪಗಾವಿ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದರು.
ರೈತರು ಸಾಕಷ್ಟು ಕಷ್ಟಪಟ್ಟು ದುಡಿದರೂ ಬೆಳೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಅತಿವಷ್ಟಿ ಹಾಗೂ ಅನಾವಷ್ಟಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಚಳಿಗಾಲದ ಅಧಿವೇಶನದಲ್ಲಿ ರೈತರಿಗೆ ನ್ಯಾಯ ಕೊಡುವ ಹಾಗೂ ಅವರಿಗೆ ಪರಿಹಾರ ಒದಗಿಸುವ ಕೆಲಸ ಆಗಬೇಕು. ಡಿ.16ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಚೂನಪ್ಪ ಪೂಜೇರ ನೇತತ್ವದಲ್ಲಿ ನಡೆಯಲಿದೆ ಎಂದರು.
ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷ ಬಸವರಾಜ ಬಿಜ್ಜೂರ್ ಮಾತನಾಡಿ, ಬೆಳೆ ಹಾನಿ ಪರಿಹಾರ, ತಾಲೂಕಿನ ಜಮೀನುಗಳನ್ನು ಸಂಪೂರ್ಣವಾಗಿ ನೀರಾವರಿಗೆ ಒಳಪಡಿಸಲು ಶಾಶ್ವತವಾದ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕು. ಕಳಸಾ ಬಂಡೂರಿ ಹಾಗೂ ಮಹದಾಯಿ ಜೋಡಿಸುವ ಕಾಮಗಾರಿ, ಸತ್ತಿಗೇರಿ ಏತ ನೀರಾವರಿ ಯೋಜನೆಗಾಗಿ ಹೋರಾಟ ಅನಿವಾರ್ಯ ಎಂದರು.
ಪದಾಧಿಕಾರಿಗಳಾದ ಸುನಂದಮ್ಮ ಬಡಿಗೇರ, ಸುರೇಶ ಅಂಗಡಿ, ಗಂಗಪ್ಪ ನನದಗಿ, ಯಲ್ಲಪ್ಪ ಅಂತಕ್ಕನವರ, ಎಸ್.ಆರ್. ಕಿತ್ತೂರ, ಪ್ರವೀಣಕುಮಾರ ಅವಗಡನವರ, ಮಲ್ಲವ್ವ ಹಿರೇಮಠ, ಎಂ.ಎಂ. ಕೋಟಗಿ, ಶಾಂತವ್ವ ಕೊಟಗಿ, ಮಹಾದೇವಿ ಹಳಮನಿ, ನಾಗವ ಯಮನೂರ, ಗೌಡಪ್ಪ ಕಳಸಪ್ಪನವರ ಇತರರಿದ್ದರು.