

ಕಲಬುರಗಿ: ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ನಗರ ಸೇರಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಹಸಿಲ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರದರ್ಶನ ನಡೆಸಿದ ಮೋರ್ಚಾ ಪ್ರಮುಖರು, ಮಳೆ ಕೊರತೆಯಿಂದಾಗಿ ಬರ ಆವರಿಸಿದೆ. ಇಂಥದರಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ರೈತಪರ ಯೋಜನೆಗಳನ್ನು ರದ್ದುಪಡಿಸಿರುವ ಸರ್ಕಾರ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಗೆ ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ರೈತರ ಜಮೀನಿಗೆ ಸಮರ್ಪಕ ನೀರು ಸಿಗುತ್ತಿಲ್ಲ. ಹಗಲಲ್ಲಿ ನಿರಂತರ ಏಳು ತಾಸು ವಿದ್ಯುತ್ ಪೂರೈಸುವ ಬದಲು ಅನಿಯಮಿತ ಲೋಡ್‌ಶೆಡ್ಡಿಂಗ್‌ನಿAದಾಗಿ ಸಕಾಲಕ್ಕೆ ನೀರು ಸಿಗದೆ ಬೆಳೆಗಳು ಒಣಗಲಾರಂಭಿಸಿವೆ. ಬಿಜೆಪಿ ಸರ್ಕಾರದ ಅವಧಿಯ ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂಸಿರಿ, ಶ್ರಮಶಕ್ತಿ, ರೈತ ಸಂಪದ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಹೀಗೆ ಎಲ್ಲ ಯೋಜನೆಗಳನ್ನು ರದ್ದುಪಡಿಸಿ ಸರ್ಕಾರ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುಮಾರು ೪೨ ರೈತರ ಆತ್ಮಹತ್ಯೆ ಪ್ರಕರಣ ವರದಿ ಆಗಿರುವುದು ಆತಂಕಕಾರಿ ಸಂಗತಿ. ಲೋಡ್‌ಶೆಡ್ಡಿಂಗ್ ರದ್ದುಪಡಿಸಿ ಹೊಲಗಳಿಗೆ ನಿರಂತರ ವಿದ್ಯುತ್ ಪೂರೈಸಬೇಕು. ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಆತ್ಮಹತ್ಯೆಗಳಿಗೆ ಕಡಿವಾಣ ಹಾಕಿ ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ರೈತ ಮೋರ್ಚಾ ನಗರ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಕಮಲಾಪುರ, ಪ್ರಮುಖರಾದ ದಯಾಘನ್ ಧಾರವಾಡಕರ್, ಶಿವಯೋಗಿ ನಾಗನಹಳ್ಳಿ, ಮಲ್ಲು ಉದನೂರ, ಮಹಾದೇವ ಬೆಳಮಗಿ, ರಾಜುಗೌಡ ನಾಗನಹಳ್ಳಿ, ಗಿರಿರಾಜ ಯಳಮೇಲಿ, ರಾಜೇಂದ್ರ ಕರೇಕಲ್, ವಿಶ್ವನಾಥ ಪಾಟೀಲ್ ಗೌನಳ್ಳಿ, ಮಹೇಶ ರಡ್ಡಿ, ಭೀಮಾಶಂಕರ ಹೀರಾಪುರ, ವೀರೇಶ ನಂದಿಕೂರ, ಅಂಬಾರಾಯ ಹಡಗಿಲ್, ವಿಜಯಕುಮಾರ ಹಳಕಟ್ಟಿ, ಶಾಂತಕುಮಾರ ಬಿರಾದಾರ್, ರಾಚಣ್ಣ ಗಟಬೇಳಿ, ವಿಠ್ಠಲ್ ಚವ್ಹಾಣ್, ಸುಭಾಶ್ಚಂದ್ರ ಮೂಲಗೆ, ಚಂದ್ರು ನಾಗನಳ್ಳಿ, ಕುಮಣ್ಣಗೌಡ ಸಾವಳಗಿ, ಶಾಮರಾವ ನಂದಿಕೂರ, ಜಗನ್ನಾಥ ಮೈಲಾರಿ ಇತರರಿದ್ದರು. ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಲಾಯಿತು.