ಹಳಿಯಾಳ: ರೈತರ ಹಿತಾಸಕ್ತಿ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಿದ್ದು, ನಮ್ಮ ಕಂಪನಿಯಿಂದ ರೈತರಿಗೆ ಕೊಡಬೇಕಾದಂತಹ ಯಾವುದೇ ಬಾಕಿ ಇಲ್ಲ ಎಂದು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಸ್ಪಷ್ಟಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕಾರ್ಖಾನೆಯ ಕಬ್ಬು ವಿಭಾಗದ ಸಿನಿಯರ್ ಜನರಲ್ ಮ್ಯಾನೇಜರ್ ಕೃಷ್ಣಕಾಂತ ರೆಡ್ಡಿ, ಕಾರ್ಖಾನೆಯ ಆರಂಭದಲ್ಲಿ 3000 ಎಕರೆ ಇದ್ದ ಕಬ್ಬಿನ ಪ್ರದೇಶ ಈಗ 36 ಸಾವಿರ ಎಕರೆಗೆ ವೃದ್ಧಿಯಾಗಿದೆ. ಶುಗರ್ ಕೇನ್ ಕಂಟ್ರೋಲ್ ಆಕ್ಟ್ ಪ್ರಕಾರ, ಕಬ್ಬು ಸರಬರಾಜು ಮಾಡಿದ ಎಲ್ಲ ರೈತರ ಖಾತೆಗೆ 14 ದಿನಗಳಲ್ಲಿ ಎಫ್ಆರ್ಪಿ ಪ್ರಕಾರ ಬಿಲ್ ಜಮಾ ಮಾಡಲಾಗುತ್ತಿದೆ. ಕಳೆದ ವರ್ಷ 2019-20ನೇ ಸಾಲಿನಲ್ಲಿ ಕೇವಲ 24 ಗಂಟೆಗಳಲ್ಲಿ ರೈತರ ಖಾತೆಗೆ ಬಿಲ್ ಜಮಾ ಮಾಡಲಾಗಿದೆ. ಕೋವಿಡ್ ಪರಿಣಾಮ ಲಾಕ್ಡೌನ್ ಆದೇಶವಾದ ನಂತರ ಕಾರ್ಖಾನೆಯ ಆರ್ಥಿಕ ಸ್ಥಿತಿ ಸರಿಯಾಗದಿದ್ದರೂ, ಮಾ. 31ರೊಳಗೆ ರೈತರ ಕಬ್ಬಿನ ಬಿಲ್ ಜಮಾ ಮಾಡಲಾಗಿದೆ.
2020-21ನೇ ಸಾಲಿನ ಪ್ರಸಕ್ತ ಹಂಗಾಮಿನಲ್ಲಿಯೂ ರೈತರ ಕಬ್ಬಿನ ಬಿಲ್ ಅನ್ನು ಎಫ್ಆರ್ಪಿ ದರದಲ್ಲಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ ರೈತರ ಖಾತೆಗೆ ಕೂಡಲೆ ಜಮಾ ಮಾಡಲಾಗುವುದು. ಕಾರ್ಖಾನೆಯ ಮೀಸಲು ಕ್ಷೇತ್ರದಲ್ಲಿ ಕಬ್ಬಿನ ಉತ್ಪಾದನೆ ಹೆಚ್ಚಾಗಿದ್ದ ವರ್ಷಗಳಲ್ಲಿ ರೈತರ ಕಬ್ಬುಗಳನ್ನು ಬೇಗನೆ ಕಟಾವು ಮಾಡಲು ಇಐಡಿ ಪ್ಯಾರಿ ಶಾಖೆಗಳಾದ ರಾಮದುರ್ಗ ಮತ್ತು ಬಾಗಲಕೋಟೆಯ ಕಾರ್ಖಾನೆಗಳಿಗೂ ಸಾಗಿಸಿ ಅನುಕೂಲ ಮಾಡಿಕೊಡಲಾಗಿದೆ. ಪ್ರಸಕ್ತ ವರ್ಷ ಕಾರ್ಖಾನೆಯ ಮೀಸಲು ಕ್ಷೇತ್ರದಲ್ಲಿ ಕಬ್ಬಿನ ಎಕರೆವಾರು ಇಳುವರಿ ಪ್ರಮಾಣ ಕಳೆದ ವರ್ಷಕ್ಕಿಂತ ಶೇ. 20 ಹೆಚ್ಚಿಗೆ ಇರುವುದರಿಂದ ಕಾರ್ಖಾನೆಯನ್ನು ಕೂಡಲೆ, ಪ್ರಾರಂಭಿಸಿದರೆ ಮಾರ್ಚ್ ತಿಂಗಳೊಳಗೆ ಎಲ್ಲ ಕಬ್ಬು ಕಟಾವು ಮಾಡಲು ಅನುಕೂಲವಾಗುತ್ತದೆ.
ಇಲ್ಲಿಯವರೆಗೆ ರೈತರಿಗೆ ಪಾವತಿಸಬೇಕಾದ ಯಾವುದೇ ಬಾಕಿ ಉಳಿದಿಲ್ಲ. ಹಾಗೂ ಕಾರ್ಖಾನೆಯಿಂದಲೂ ಏನು ಬಾಕಿ ಇಲ್ಲವೆಂದು ರೈತರ ಗಮನಕ್ಕೆ ತರುತ್ತಿದ್ದೇವೆ. ಅದಕ್ಕಾಗಿ ಕಾರ್ಖಾನೆಯ ಮೀಸಲು ಕ್ಷೇತ್ರದ ರೈತರು ಕಾರ್ಖಾನೆ ಪ್ರಾರಂಭಿಸಲು ಅನುಕೂಲ ಮಾಡಿಕೊಡಬೇಕು. ಪ್ರತಿವರ್ಷದಂತೆ ನಿಗದಿತ ಸಮಯದೊಳಗೆ ಕಬ್ಬಿನ ಬಿಲ್ ಪಾವತಿಸಲಿದ್ದು ರೈತರು ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
EndFragment