ರೈತರ ಪರ ತೀರ್ಮಾನಕ್ಕೆ ಬದ್ಧ

17spt3
ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು.
Published on

ಸೋಮವಾರಪೇಟೆ: ಸಣ್ಣ ಕಾಫಿ ಬೆಳೆಗಾರರ 10ಎಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸಲೇಬೇಕು. ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಕುರಿತು ಒಂದಷ್ಟು ಗೊಂದಲವಿದ್ದು, ಸಿಎಂ, ಡಿಸಿಎಂ ಹಾಗೂ ಇಂಧನ ಸಚಿವರೊಂದಿಗೆ ಚರ್ಚಿಸಿ, ಬೆಳೆಗಾರರ ಪರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್‌ಗೌಡ ಭರವಸೆ ನೀಡಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸಂಜೆ ನಡೆದ ಪತ್ರಕರ್ತರ ಜತೆಗಿನ ಸಂವಾದದಲ್ಲಿ ಮಾತನಾಡಿದರು.

ಸೋಮವಾರಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಹಾಸಿಗೆಗಳನ್ನು ಹೆಚ್ಚಿಸಿದರೆ ಸಾಲದು, ಉತ್ತಮ ಸೌಲಭ್ಯ ಸಿಗಬೇಕು. ಸುಸಜ್ಜಿತ ಒ.ಟಿ.ಇರಬೇಕು. ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸುವ ವೈದ್ಯರು ಬೇಕು. ತಜ್ಞ ವೈದ್ಯರ ನೇಮಕ ಹಾಗೂ ಕಟ್ಟಡ ದುರಸ್ತಿಗೆ ಆದ್ಯತೆ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಜಲಜೀವನ್ ಯೋಜನೆ ಅನುಷ್ಠಾನಗೊಂಡಿದೆ. ಬಹುತೇಕ ಕಡೆ ಕೊಳಾಯಿ ಇದೆ. ಆದರೆ, ನೀರು ಮಾತ್ರ ಎಲ್ಲೂ ಇಲ್ಲ. ಸಂಪನ್ಮೂಲಗಳನ್ನು ಬಳಸುವಾಗ ಇಲಾಖೆ ಎಂಜಿನಿಯರ್‌ಗಳು ಎಚ್ಚರಿಕೆ ವಹಿಸಬೇಕಿತ್ತು. ನೀರಿನ ಮೂಲ ಕಂಡುಹಿಡಿದು ನಂತರ ಯೋಜನೆ ರೂಪಿಸಬೇಕಿತ್ತು ಎಂದು ಶಾಸಕರು ಹೇಳಿದರು.

ರಾಜ್ಯ ಹೆದ್ದಾರಿ, ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆ, ಗ್ರಾಮೀಣ ರಸ್ತೆಗಳು, ಜಿಲ್ಲಾಡಳಿತದ ಕಚೇರಿ ಎದುರು ಇರುವ ತಡೆಗೋಡೆ ಕಾಮಗಾರಿ ಕಳಪೆಯಾಗಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಯಾವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿದ ಉದಾಹರಣೆಯಿಲ್ಲ. ಮುಂದೆ ಯಾವುದೇ ಕಾಮಗಾರಿ ಕಳಪೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸೋಮವಾರಪೇಟೆಯ ಟರ್ಫ್ ಮೈದಾನ ನಿರ್ಮಾಣದಲ್ಲಿ ಉಪ ಗುತ್ತಿಗೆ ನೀಡುವ ಮೂಲಕ ಕಳಪೆ ಗುಣಮಟ್ಟದ ಸಾಮಗ್ರಿ ಬಳಸಲಾಗಿದೆ. ರಾಜ್ಯ ಸರಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವರ ಮೂಲಕ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net