

ಹಾವೇರಿ: ಜಿಲ್ಲೆಯಲ್ಲಿ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರ, ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ನ ಟಾಸ್ಕ್ಪೋರ್ಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅವರಿಗೆ ಮನವಿ ಸಲ್ಲಿಸಲಾಗಿದೆ.
ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಯಾದ ಕಾಂಗ್ರೆಸ್ ಮುಖಂಡರು, ಹಿಂದಿನ ಸರ್ಕಾರ ಬಡವರಿಗೆ 7ಕೆಜಿ ಅಕ್ಕಿ ನೀಡುತ್ತಿತ್ತು.
ಈಗಿನ ಸರ್ಕಾರ 5ಕೆಜಿ ನೀಡುತ್ತಿದೆ. ಅದು ಸಾಕಾಗುವುದಿಲ್ಲ. ನಮ್ಮ ಸರ್ಕಾರ ನೀಡಿದಂತೆ 7ಕೆಜಿ ಅಕ್ಕಿ, 5ಕೆಜಿ ಗೋಧಿ, 2ಕೆಜಿ ಅಡುಗೆ ಎಣ್ಣೆ, 2ಕೆಜಿ ತೊಗರಿಬೇಳೆ ಪೂರೈಸಬೇಕು. ಬಡಕುಟುಂಬಗಳಿಗೆ ಹಾಲು ವಿತರಿಸುತ್ತಿದ್ದು, ಆಡಳಿತ ಪಕ್ಷ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಅಲ್ಲದೆ, ಒಂದು ಪಕ್ಷದ
ಕಾರ್ಯಕರ್ತರಿಗೆ ಮಾತ್ರ ಹಾಲನ್ನು ನೀಡಲಾಗುತ್ತಿದೆ. ಅರ್ಹ ಬಡ ಕುಟುಂಬದವರೆಲ್ಲರಿಗೂ ಹಾಲು ವಿತರಿಸಬೇಕು. ವಲಸೆ, ಅಲೆಮಾರಿ, ಅಸಂಘಟಿತ ಕಾರ್ವಿುಕರಿಗೆ 2ತಿಂಗಳ ಅವಶ್ಯಕ ಪಡಿತರ ಧಾನ್ಯಗಳನ್ನು ವಿತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ಬಂದ್ ಮಾಡಲಾಗಿದೆ. ಆಸ್ಪತ್ರೆಗಳನ್ನು ಕರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವುದರಿಂದ ಸಾರ್ವ ಜನಿಕರಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳೂ ಸಹ ತೆರೆದಿಲ್ಲ. ರೋಗಿಗಳು ಎಲ್ಲಿ ಹೋಗಬೇಕು?
ಅನೇಕ ರೋಗಿಗಳು ಕಾಯಿಲೆಗಳಿಂದ ನರಳುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ರೋಗಿಗಳು ಸರ್ಕಾರಿ ಆಸ್ಪತ್ರೆಯನ್ನೇ ನಂಬಿಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸಾರ್ವಜನಿಕರಿಗೆ ಚಿಕಿತ್ಸೆ ನೀಡುವಂತಾಗಬೇಕು. ನಗರದ ಹೊರವಲಯದಲ್ಲಿರುವ ವಸತಿ ನಿಲಯಗಳ ದೊಡ್ಡ ಕಟ್ಟಡಗಳನ್ನು ಬಳಸಿ ಕೊಂಡು ಅವುಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ಅಲ್ಲಿ ಕರೊನಾ ಚಿಕಿತ್ಸೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಎಸ್.ಎಫ್.ಎನ್. ಗಾಜಿಗೌಡ್ರ, ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಶಿವಜಾತಪ್ಪ ಚನ್ನೂರ, ಬಸವರಾಜ ಬಳ್ಳಾರಿ, ದಾದಾಪೀರ್ ಚೂಡಿಗಾರ, ನಿಂಗರಾಜ ಶಿವಣ್ಣನವರ, ಸತೀಶ ಈಳಗೇರ, ನಾಗರಾಜ ತಳವಾರ, ಗಣೇಶ ಬಿಷ್ಟಣ್ಣನವರ, ಉಳಿವೆಪ್ಪ ಹಲಗಣ್ಣನವರ ಇತರರಿದ್ದರು.