ರೈತರ ಕಬ್ಬಿನ ಬಾಕಿ ಬಿಲ್‌ಗೆ ಗಡವು

bkt-15-2
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಕಬ್ಬು ಬೆಳೆಗಾರರು ಹಾಗೂ ಮುಖಂಡರ ಜೊತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಽಕಾರಿ ಜಾನಕಿ ಕೆ.ಎಂ ಮಾತನಾಡಿದರು.
Published on

ಬಾಗಲಕೋಟೆ: ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ಘೋಷಿಸಿದ ಮೊತ್ತದ ಬಾಕಿ ಹಣವನ್ನು ಅ.೨೦ ರೊಳಗಾಗಿ ಪಾವತಿಸುವಂತೆ ಜಿಲ್ಲಾಽಕಾರಿ ಜಾನಕಿ ಕೆ.ಎಂ ಕಾರ್ಖಾನೆ ಮಾಲೀಕರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಕಬ್ಬು ಬೆಳೆಗಾರರು ಹಾಗೂ ಮುಖಂಡರ ಜೊತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಫ್.ಆರ್.ಪಿ ಪ್ರಕಾರ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ಹಣವನ್ನು ಪಾವತಿಸಿದ್ದಾರೆ. ಆದರೆ ಹೆಚ್ಚುವರಿ ಘೋಷಿಸಿದ ಮೊತ್ತವನ್ನು ಪಾವತಿಸಲು ಬಾಕಿ ಉಳಿಸಿಕೊಂಡಿದ್ದು, ರೈತರ ಮನವಿ ಹಿನ್ನಲೆಯಲ್ಲಿ ಅ.೨೦ ರೊಳಗಾಗಿ ಪಾವತಿಸಿಲು ಗುಡುವು ನೀಡಲಾಗಿದೆ ಎಂದು ತಿಳಿಸಿದರು.

ರೈತರು ಹಾಗೂ ರೈತ ಮುಖಂಡರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಽಕಾರಿಗಳು ಕಳೆದ ೨೦೧೮-೧೯ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಘೋಷಿಸಿದ ಪ್ರತಿ ಟನ್‌ಗೆ ೧೭೫ ರೂ.ಗಳಂತೆ ಪಾವತಿಸಬೇಕಾದ ಮೊತ್ತ ಬಾಕಿ ಉಳಿದಿರುತ್ತದೆ. ಅದರಂತೆ ೨೦೨೦-೨೧ನೇ ಸಾಲಿನಲ್ಲಿ ೧೪೫ ರೂ.ಗಳ ಒಟ್ಟು ೬ ಕೋಟಿ ರೂ, ೨೦೨೨-೨೩ನೇ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭಿಸುವ ಮುನ್ನ ಹಿಂದಿನ ಸಾಲಿನ ೨೦೨೧-೨೨ನೇ ಹೆಚ್ಚುವರಿಯಾಗಿ ೬೨ ರೂ.ಗಳ ನೀಡುವುದಾಗಿ ತಿಳಿಸಿದ್ದರು. ಆದರೆ ಕೇವಲ ಒಂದು ಕಾರ್ಖಾನೆಯವರು ಮಾತ್ರ ಮೊತ್ತ ಪಾವತಿಸಿದ್ದು, ಉಳಿದ ಕಾರ್ಖಾನೆಗಳು ಮೊತ್ತ ಪಾವತಿಗೆ ರೈತರು ಪಟ್ಟು ಹಿಡಿದರು.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ೧೩ ಸಕ್ಕರೆ ಕಾರ್ಖಾನೆಗಳ ಪೈಕಿ ೭ ಕಾರ್ಖಾನೆಗಳು ಡಿಜಿಟಲ್ ತೂಕದ ಯಂತ್ರವನ್ನು ಒಳವಡಿಸಿದ್ದು, ಇನ್ನು ೬ ಕಾರ್ಖಾನೆಯವರು ಡಿಜಿಟಲ್ ಯಂತ್ರ ಅಳವಡಿಸುವ ಕಾರ್ಯ ಪ್ರಗತಿಯಲ್ಲಿರುವುದಾಗಿ ಜಿಲ್ಲಾಽಕಾರಿಗಳು ತಿಳಿಸಿದರು. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ೧೪ ದಿನಗಳ ಒಳಗಾಗಿ ಬಿಲ್ ಪಾವತಿಸಬೇಕು. ತಪ್ಪಿದಲ್ಲಿ ಶೇ.೧೫ರ ಬಡ್ಡಿ ಸಮೇತ ಬಿಲ್ ಪಾವತಿಸಬೇಕಾಗುತ್ತದೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ತಿಳಿಸಿದರು.

ಪ್ರತಿ ಸಕ್ಕರೆ ಕಾರ್ಖಾನೆಯವರು ಏಕರೂಪದ ದರ ನಿಗದಿಪಡಿಸಬೇಕು. ಈ ಕುರಿತು ಕಾರ್ಖಾನೆಯಿಂದ ಸ್ಪಷ್ಟ ಮಾಹಿತಿ ಪಡೆದುಕೊಳ್ಳಲಾಗುವುದು. ತೂಕದಲ್ಲಿ ಕಾರ್ಖಾನೆಯಿಂದ ಮೋಸ ಆಗದಂತೆ ಸೂಕ್ತ ಕ್ರಮವಹಿಸಲಾಗುವುದು. ಮೋಸ ಮಾಡುತ್ತಿರುವ ಬಗ್ಗೆ ರೈತರ ಗಮನಕ್ಕೆ ಬಂದಲ್ಲಿ ತಕ್ಷಣ ನಮಗೆ ಮಾಹಿತಿ ನೀಡುವಂತೆ ಜಿಲ್ಲಾಽಕಾರಿಗಳು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರ ಸಕ್ಕರೆ ಕಾರ್ಖಾನೆಗಳಿಗೆ ಬಾಕಿ ಪಾವತಿಗೆ ಕ್ರಮವಹಿಸಲಾಗುತ್ತದೆ. ರೈತರ ಪರವಾಗಿ ಜಿಲ್ಲಾಡಳಿತ ಇದ್ದು, ಬಾಕಿ ಪಾವತಿಗೆ ನೂರಕ್ಕೆ ನೂರರಷ್ಟು ಕ್ರಮವಹಿಸಲಾಗುವುದು. ಸಕ್ಕರೆ ಕಾರ್ಖಾನೆಗಳು ದರ ನಿಗದಿಪಡಿಸುವುದೊಂದು ಪಾವತಿಸುವುದು ಒಂದು ಆಗುತ್ತಿದೆ. ತಾರತಮ್ಯ ನೀತಿಯನ್ನು ಕಾರ್ಖಾನೆಗಳು ಅನುಸರಿಸುತ್ತಿರುವುದಾಗಿ ರೈತರು ಸಭೆಗೆ ತಿಳಿಸಿದಾಗ ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಕ್ಕರೆ ಆಯುಕ್ತರೊಂದಿಗೆ ರೈತರು ಮತ್ತು ಕಾರ್ಖಾನೆ ಮಾಲಿಕರ ಜೊತೆ ಸಭೆ ಜರುಗಿಸುವಂತೆ ಸಭೆಯಲ್ಲಿ ರೈತರು ಹಾಗೂ ರೈತ ಮುಖಂಡರು ಮನವಿ ಮಾಡಿಕೊಂಡರು.

ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಉಪವಿಭಾಗಾಽಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net