ರೈತನ ಆಧಾರ್ ಕಾರ್ಡ್ ಬೇರೊಬ್ಬರಿಗೆ ಟ್ರಾೃಕ್ಟರ್ ಮಾರಾಟ

13BANNU1
Published on

ಬನ್ನೂರು: ಆಧಾರ್ ಕಾರ್ಡ್ ಪಡೆದು ಟ್ರಾೃಕ್ಟರ್ ಶೋರೂಂನ ವ್ಯವಸ್ಥಾಪಕರೊಬ್ಬರು ಬೇರೊಬ್ಬ ಗ್ರಾಹಕರಿಗೆ ಟ್ರಾೃಕ್ಟರ್ ನೀಡಿ ಸಾಲ ಮರು ಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಪಟ್ಟಣದ ಸಮೀಪದ ಕೇತುಪುರ ಗ್ರಾಮದ ರೈತ ನಾಗರಾಜು ಎನ್ನುವವರೇ ಕಿರುಕುಳಕ್ಕೆ ಒಳಗಾದ ರೈತ.

ನಂಜನಗೂಡಿನ ಟ್ರಾೃಕ್ಟರ್ ಶೋರೂಂನ ವ್ಯವಸ್ಥಾಪಕರು ಬೇರೊಬ್ಬರಿಗೆ ಟ್ರಾಕ್ಟರ್ ಮಂಜೂರು ಮಾಡಿಸಿ ತಮ್ಮನ್ನು ಸಾಲ ಪಾವತಿಸುವಂತೆ ಹಿಂಸಿಸುತ್ತಿದ್ದಾರೆಂದು ರೈತ ನಾಗರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರಿಗೆ ಮನವಿ ಮಾಡಿ ನಂತರ ಸುದ್ದಿಗಾರರ ಮುಂದೆ ಅಳಲು ತೋಡಿಕೊಂಡಿದ್ದು, ತಮಗೆ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.

ನಾನು ಟ್ರಾೃಕ್ಟರ್ ಸಾಲ ಬಯಸದೇ ಯಾವುದೇ ದಾಖಲಾತಿಯನ್ನು ನೀಡದಿದ್ದರೂ ಟ್ರಾೃಕ್ಟರ್ ಶೋರೂಂನ ವ್ಯವಸ್ಥಾಪಕರು ಮತ್ತೊಬ್ಬರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ತಮಗೆ ಭಾರಿ ಅನ್ಯಾಯ ಮಾಡಿದ್ದಾರೆಂದು ಅವರು ಆರೋಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ನಾರಾಯಣ್ ಮಾತನಾಡಿ, ರೈತರಿಗೆ ತಿಳಿಯದಂತೆ ವಂಚಿಸುವ ವ್ಯವಸ್ಥಿತವಾದ ಒಂದು ಜಾಲ ರೂಪಿತವಾಗಿದೆ ಎನ್ನುವುದಕ್ಕೆ ಮುಗ್ಧ ರೈತ ನಾಗರಾಜು ಅವರೇ ಸಾಕ್ಷಿಯಾಗಿದ್ದಾರೆ. ಅವರ ಆಧಾರ್ ಕಾರ್ಡ್ ಪಡೆದುಕೊಂಡು ಮತ್ತೊಬ್ಬರಿಗೆ ಸಾಲ ಒದಗಿಸಿದ ಬ್ಯಾಂಕ್‌ನ ಆಡಳಿತದ ದೋಷವು ಇದರಲ್ಲಿ ಎದ್ದು ಕಾಣುತ್ತಿದೆ ಎಂದರು.

ಬೇರೊಬ್ಬ ವ್ಯಕ್ತಿಗೆ ಟ್ರಾೃಕ್ಟರ್ ಮಾರಾಟ ಮಾಡಲೆಂದು ಟ್ರಾೃಕ್ಟರ್ ಶೋರೂಂನ ವ್ಯವಸ್ಥಾಪಕರು ಈ ರೀತಿ ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ. ವಾಸ್ತವವಾಗಿ ನಾಗರಾಜು ತನಗೆ ಸಾಲ ಬೇಕೆಂದು ಯಾವುದೇ ದಾಖಲೆಯನ್ನು ನೀಡಿಲ್ಲ ಎಂದು ತಿಳಿಸಿದರು.

ಕೇವಲ ಆಧಾರ್ ಕಾರ್ಡ್ ಅನ್ನು ಆಧಾರವಾಗಿಟ್ಟುಕೊಂಡು ಯಾವುದೇ ಮಾಹಿತಿ ನೀಡದೇ ಹೇಗೆ ಸಾಲ ಮಂಜೂರು ಮಾಡಲು ಸಾಧ್ಯವಾಗಿದೆ ಎಂದು ಪ್ರಶ್ನಿಸಿದ ಅವರು, ಇದರ ವಿರುದ್ಧ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಕೂಡಲೇ ಅನ್ಯಾಯವಾಗಿರುವ ರೈತ ನಾಗರಾಜು ಅವರಿಗೆ ನ್ಯಾಯ ಒದಗಿಸಿ ಅವರ ಮೇಲೆ ಯಾವುದೇ ಸಾಲದ ಮರು ಪಾವತಿಗೆ ಧಮಕಿ ಹಾಕಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾಲ ಮಂಜೂರು ಮಾಡಿದ ಬ್ಯಾಂಕ್ ಶಾಖಾ ಕೇಂದ್ರದ ಬಳಿ ಸಂಘಟನೆಯ ವತಿಯಿಂದ ಪ್ರತಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬೆಟ್ಟಹಳ್ಳಿ ಶಿವರಾಂ, ಅತ್ತಹಳ್ಳಿ ಸ್ವಾಮಿರಾಜ್, ಶಾಂತರಾಜು, ವಿಶ್ವನಾಥ್, ನಾಗರಾಜು, ಪ್ರಕಾಶ, ಆನಂದ, ಎಸ್.ಜೆ.ರಾಜು, ನಾಗೇಂದ್ರ, ತುರಗನೂರು ಚನ್ನೇಗೌಡ, ಗಿರೀಶ, ಪಾರ್ಥ, ಕೃಷ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net