ರೈತ ಸಮುದಾಯದ ದೂಷಣೆ ಸರಿಯಲ್ಲ

BC PATIL HKR
Published on

ಹಾವೇರಿ: ಯಾರೋ ಒಬ್ಬರು ಜಮೀನಿನಲ್ಲಿ ಗಾಂಜಾ ಬೆಳೆದು ತಪ್ಪು ಮಾಡಿದರು ಎಂದ ಮಾತ್ರಕ್ಕೆ ಅನ್ನ ಕೊಡುವ ಇಡೀ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಆಪ್ ಸಮೀಕ್ಷೆ ಪ್ರಾಯೋಗಿಕ ಹಂತದಲ್ಲಿಯೇ ಯಶಸ್ವಿಯಾಗಿದೆ. 2017ರಲ್ಲಿ ಬೆಳೆ ಸಮೀಕ್ಷೆ ಮಾಡಿದಾಗ ಸುಮಾರು 3 ಸಾವಿರ ರೈತರು ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಈಬಾರಿ ಸೆ. 11ರವರೆಗೆ 76 ಲಕ್ಷ ಪ್ಲಾಟ್​ಗಳ ಸಮೀಕ್ಷೆಯಾಗಿದೆ. ರೈತರು ಆಸಕ್ತಿಯಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಬೆಳೆ ಸಮೀಕ್ಷೆ ನಡೆಸುವುದು ಅತ್ಯವಶ್ಯಕವೂ ಆಗಿದೆ. ಕೆಲವೆಡೆ ನೆಟ್​ವರ್ಕ್ ಸಮಸ್ಯೆಯಿಂದ ಬೆಳೆ ಸಮೀಕ್ಷೆ ಅಪ್​ಲೋಡ್ ತಡವಾಗಿದೆ. ಈಗ ಖಾಸಗಿ ಏಜೆನ್ಸಿಗಳ ಮೂಲಕ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ನಟರಾಗಲಿ, ನಟಿಯರಾಗಲಿ ಯಾರೂ ತಪ್ಪು ಮಾಡಿದರೂ ಅದು ತಪ್ಪೇ. ಡ್ರಗ್ಸ್ ದಂಧೆಯ ತನಿಖೆ ನಡೆಯುತ್ತಿದೆ. ಅಪರಾಧಿಗಳು ಯಾರು ಎಂಬುದು ತನಿಖೆಯಿಂದ ಹೊರಬರಲಿದೆ. ಈ ಹಿಂದೆ ನಾನು ನಟನಾಗಿದ್ದ ಸಮಯದಲ್ಲಿ ಚಿತ್ರರಂಗದಲ್ಲಿ ಪರಿಶುದ್ಧ ವಾತಾವರಣವಿತ್ತು. ಶೂಟಿಂಗ್ ವೇಳೆಯಲ್ಲಿ ಸಣ್ಣ ತಪ್ಪಾದರೂ ಪಶ್ಚಾತ್ತಾಪ ಪಡುವಂತಹ ವಾತಾವರಣವಿತ್ತು. ಈಗ ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರ ಕೇಳಿಬಂದಿರುವುದು ನಿಜಕ್ಕೂ ಬೇಸರದ ಸಂಗತಿ. ಈ ದಂಧೆ ಬರೀ ಚಿತ್ರರಂಗ ಮಾತ್ರವಲ್ಲ, ಎಲ್ಲ ರಂಗದಲ್ಲಿಯೂ ಇದೆ. ಚಿತ್ರರಂಗದಲ್ಲಿ ನಡೆದಿರುವುದು ಬಹಳ ಬೇಗ ಎದ್ದು ಕಾಣುತ್ತದೆ ಎಂದರು.

ಚಿತ್ರರಂಗದಲ್ಲಿರುವವರು ಗಾಜಿನ ಮನೆಯಲ್ಲಿ ಇದ್ದಂತೆ. ಅವರನ್ನು ನೋಡಿ ಹಿಂಬಾಲಿಸುವ ಅಭಿಮಾನಿಗಳಿರುತ್ತಾರೆ. ಅವರಿಗೆ ನಾವು ರೋಲ್ ಮಾಡೆಲ್ ಆಗಿರಬೇಕು. ನಾವೇ ದಾರಿ ತಪ್ಪಿದಾಗ ನಮ್ಮ ಫಾಲೋವರ್ಸ್ ಮೇಲೆ ದುಷ್ಪರಿಣಾಮ ಬೀರುತ್ತದೆ. ಚಿತ್ರರಂಗ ಕೆಟ್ಟಿದೆ ಎಂದು ಹೇಳಲು ನಾನು ತಯಾರಿಲ್ಲ. ಒಂದು ಕೊಡ ಹಾಲಿಗೆ ಚಿಟಿಕೆ ಉಪ್ಪು ಬಿದ್ದರೆ ಅದು ಹೇಗೆ ಹಾಳಾಗುತ್ತದೆಯೂ ಹಾಗೆಯೇ ಕೆಲವರು ಮಾಡಿರುವ ತಪ್ಪಿನಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಚಿತ್ರರಂಗದಲ್ಲಿ ಉತ್ತಮವಾದ ಜನರು ಇನ್ನೂ ಇದ್ದಾರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net