ರೈತ ಸಂಘಟನೆಯಿಂದ ಪ್ರತಿಭಟನೆ

04-APR-GPT-3
Published on

ಗುಂಡ್ಲುಪೇಟೆ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಸರ್ಕಾರದ ನಿರ್ಧಾರ ಖಂಡಿಸಿ ಶುಕ್ರವಾರ ರೈತ ಸಂಘಟನೆ ಸದಸ್ಯರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಸದಸ್ಯರು ಸಾರಿಗೆ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ರಚಿಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ಆರಂಭಿಸಿ ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಬರುವಂತೆ ಪಟ್ಟುಹಿಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಮಹದೇವಪ್ಪ ಮಾತನಾಡಿ, ಈಗಾಗಲೇ ರೈತಾಪಿವರ್ಗ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಮುಂದಾಗಿದೆ. ಈ ಬಗ್ಗೆ ವ್ಯಾಪಕ ವಿರೋಧವಿದ್ದರೂ ಲೆಕ್ಕಿಸದೆ ಮೀಟರ್ ಅಳವಡಿಸಲು ಮುಂದಾದರೆ ಅದನ್ನು ಒಡೆದುಹಾಕುವ ಮೂಲಕ ಚಳವಳಿಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯಾವುದೇ ಕಾರಣಕ್ಕೂ ರೈತರಿಗೆ ಮಾರಕವಾದ ಮೀಟರ್ ಅಳವಡಿಕೆ ಮಾಡಬಾರದು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರಮೇಶ್ ಬಾಬು, ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ ಅವರಿಗೆ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಹಂಗಳ ದಿಲೀಪ, ಬೊಮ್ಮನಹಳ್ಳಿ ಲೋಕೇಶ್, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net