ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

24 HANUR 4
Published on

ಹನೂರು: ಬಿ.ಎಂ.ಹಳ್ಳಿ (ಗುಳ್ಯ) ಮಾರ್ಗದ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಗುರುವಾರ ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ಮುಂಭಾಗ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಸೇನೆಯ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಈ ಭಾಗದ ಗ್ರಾಮಗಳಿಗೆ ರಸ್ತೆ ಸೇರಿದಂತೆ ಇನ್ನಿತರ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ವಿಧಾನಸಭಾ ಚುನಾವಣೆಗೂ ಮೊದಲು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ತಹಸೀಲ್ದಾರ್, ತಾಪಂ ಇಒ ಹಾಗೂ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚುನಾವಣೆಯ ಬಳಿಕ ಅಗತ್ಯ ಮೂಲಸೌಕರ್ಯ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕಾರ್ಯವಾಗಿಲ್ಲ. ಇದೀಗ ಬಿ.ಎಂ.ಹಳ್ಳಿಯಲ್ಲಿ ದೀಪಾವಳಿ ದನಗಳ ಜಾತ್ರೆಯು ಸಮೀಪಿಸುತ್ತಿದ್ದು, ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸುತ್ತಾರೆ. ಆದರೆ ಈ ಮಾರ್ಗದ ರಸ್ತೆಯ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಇದರಿಂದ ಸಾರ್ವಜನಿಕರು ಅದರಲ್ಲೂ ವಾಹನ ಸವಾರರು ಸಂಚರಿಸಲು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ತುರ್ತು ಕ್ರಮಕೈಗೊಂಡು ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಜಾತ್ರೆಯಲ್ಲಿ ಸಮರ್ಪಕ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಒತ್ತಾಯಿಸಿದರು.

ಪಿಡಿಒ ರಮೇಶ್ ಮಾತನಾಡಿ, ಜಾತ್ರೆಯ ಹಿನ್ನೆಲೆಯಲ್ಲಿ ರಸ್ತೆಯ ಗುಂಡಿಗಳಿಗೆ ತಾತ್ಕಲಿಕವಾಗಿ ಮಣ್ಣು ಹಾಕಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು. ಬಳಿಕ ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ ಡಿಸೆಂಬರ್ ಅಂತ್ಯದೊಳಗೆ ಮೆಟ್ಲಿಂಗ್ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮೈಕಲ್, ಭೈರನತ್ತ ರಾಜು, ಶಾಂತಕುಮಾರ್, ಸಿದ್ದ, ಗುರುಸ್ವಾಮಿ, ಚಿನ್ನರಾಜು, ಗಿರಿಮಲ್ಲಯ್ಯ, ನಂದೀಶ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net