ರೈತ ಸಂಘ ಕಾರ್ಯಕರ್ತರ ಪ್ರತಿಭಟನೆ

29M.D.R.1
Published on

ಮದ್ದೂರು: ತಾಲೂಕಿನ ಬಹುತೇಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಅಧಿಕ ಶುಲ್ಕ ವಸೂಲಿ ಮಾಡುವ ಮೂಲಕ ಪಾಲಕರಿಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ನೀಡುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.


ರೈತ ಸಂಘದ ಹಿರಿಯ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿ, ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶೇ.20 ರಿಂದ 30ರಷ್ಟು ಶುಲ್ಕ ಹೆಚ್ಚಿಸಿ ಪಾಲಕರಿಂದ ಅಧಿಕ ಹಣ ವಸೂಲಿ ಮಾಡುತ್ತಿವೆ. ಕ್ರಮ ಕೈಗೊಳ್ಳಬೇಕಾದ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಶಾಸಗಿ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ತಾಲೂಕಿನ ಕೀಳಘಟ್ಟ ಗ್ರಾಮದಲ್ಲಿ 2 ವರ್ಷಗಳ ಹಿಂದೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪಿಸಲಾಗಿದೆ. ಆದರೆ ಮಕ್ಕಳಿಗೆ ಬೋಧನೆ ಮಾಡಲು ಶಿಕ್ಷಕರನ್ನು ನೇಮಕ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಬಿಇಒ ಸಿ.ಎಚ್.ಕಾಳೀರಯ್ಯ ಮಾತನಾಡಿ, ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ದೂರು ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಶಾಸಗಿ ಶಾಲೆಗಳ ಆಡಳಿತ ಮಂಡಳಿ ಸಭೆ ಕರೆದು, ಸರ್ಕಾರಿ ಆದೇಶ ಮೀರಿ ಪಾಲಕರಿಂದ ಅಧಿಕ ಶುಲ್ಕ ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಲಾಗುವುದು. ಕೀಳಘಟ್ಟ ಶಾಲೆಗೆ ಬೇರೆ ಶಾಲೆಯಿಂದ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.


ಪ್ರತಿಭಟನೆ ವೇಳೆ ಬಿಇಒ ಸಿ.ಎಚ್.ಕಾಳೀರಯ್ಯ ಹಾಗೂ ರೈತ ಸಂಘದ ಮುಖಂಡರ ನಡುವೆ ಕೆಲಕಾಲ ತೀವ್ರ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಯಲ್ಲಿ ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಉಮೇಶ್, ವೆಂಕಟೇಶ್, ಅರಗಿನಮೇಳೆ ರಾಮೇಗೌಡ, ನಾಗರಾಜು, ಪುಟ್ಟಸ್ವಾಮಿ, ರಾಜೇಶ, ಸಿದ್ದು, ಜಯರಾಮು, ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net