ರೈತ ವಿರೋಧಿ ನೀತಿಗಳನ್ನು ಕೈಬಿಡಲಿ

ಫೋಟೋ ಶೀರ್ಷಿಕೆ 11 ಸಿಆರ್_ಪಿ-1 ಬಿ
Published on

ಚನ್ನರಾಯಪಟ್ಟಣ: ಕೇಂದ್ರ ಸರ್ಕಾರ ರೈತರ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಸುವ ಮೂಲಕ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದೆ. ಕೂಡಲೇ ಇಂತಹ ರೈತ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಚ್.ಆರ್.ನವೀನ್ ಆಗ್ರಹಿಸಿದರು.


ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತೆಂಗು ಬೆಳೆಗಾರರ ಹೋರಾಟ ಸಮಿತಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ನೇತೃತ್ವದಲ್ಲಿ ಚನ್ನರಾಯಪಟ್ಟಣ ತಾಲೂಕು ಸಮಿತಿ ವತಿಯಿಂದ ಆಯೋಜಿಸಿದ್ದ ಚನ್ನರಾಯಪಟ್ಟಣ ತಾಲೂಕು ತೆಂಗು ಬೆಳೆಗಾರರ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.


ಕೃಷಿ ಉತ್ಪನ್ನಗಳಿಗೆ ಬಳಸುವ ಎಲ್ಲ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಕೃಷಿ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ರೈತರ ಪರಿಸ್ಥಿತಿ ಅತ್ಯಂತ ದುಸ್ತರವಾಗುತ್ತಿದೆ. ನಷ್ಟವಾಗುತ್ತಿರುವ ಕಾರಣ ರೈತರು ಕೃಷಿಯನ್ನು ಬಿಟ್ಟು ನಗರಗಳಿಗೆ ಕೆಲಸಕ್ಕೆ ವಲಸೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿ ತಡೆಗಟ್ಟಬೇಕಿದ್ದರೆ ತೆಂಗು ಮತ್ತು ಕೊಬ್ಬರಿಗೆ ಕೃಷಿ ತಜ್ಞ ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.


ತೆಂಗು ಬೆಳೆಗಾರರ ಹೋರಾಟ ಸಮಿತಿಯ ಜಿಲ್ಲಾ ಮುಖಂಡ ಎಚ್.ಎಸ್.ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು, ಉತ್ತಮ ಮಾರುಕಟ್ಟೆ ಒದಗಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕೃಷಿಕರಿಗೆ ಅನುಕೂಲವಾಗುವಂತೆ ಎಪಿಎಂಸಿ ಮಾರುಕಟ್ಟೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳನ್ನು ಬಲಪಡಿಸಬೇಕು. ತೆಂಗು ಬೆಳೆಗಾರರ ಬೇಡಿಕೆಗಳಾದ ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಶಿಫಾರಸ್ಸಿನಂತೆ ಕೂಡಲೇ ಒಂದು ಕ್ವಿಂಟಾಲ್ ದುಂಡು ಕೊಬ್ಬರಿಯ ಬೆಲೆ 16,730 ರೂ.ಗೆ ನಿಗದಿಯಾಗಬೇಕು. ತೆಂಗಿನ ಬೆಲೆಯೂ ಕುಸಿತ ಕಂಡಿರುವುದರಿಂದ ಕೃಷಿ ತಜ್ಞ ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇ.50 ರಷ್ಟು ಲಾಭಾಂಶ ಸೇರಿಸಿ ಬೆಲೆ ನಿಗದಿ ಮಾಡಬೇಕು. ತೆಂಗು ಮತ್ತು ಕೊಬ್ಬರಿಯನ್ನು ಎಪಿಎಂಸಿ ಮಾರುಕಟ್ಟೆಯ ಮೂಲಕ ರಾಜ್ಯ ಸರ್ಕಾರವೇ ಖರೀದಿಸಬೇಕು. ಪ್ರಸ್ತುತ ನಫೆಡ್ ಮೂಲಕ ನಡೆಯುತ್ತಿರುವ ಕೊಬ್ಬರಿ ಮಾರುಕಟ್ಟೆ ವರ್ಷ ಪೂರ್ತಿ ಚಾಲ್ತಿಯಲ್ಲಿರಬೇಕು. ಮಾರುಕಟ್ಟೆಯಲ್ಲಿರುವ ಭ್ರಷ್ಟಾಚಾರ ತಡೆಯಲು ರೈತಪರ ನೀತಿಗಳನ್ನು ಜಾರಿಗೊಳಿಸಬೇಕು. ವಿದ್ಯುತ್ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆ ನಿರ್ಧಾರವನ್ನು ಕೈಬಿಡಬೇಕು, ಉಚಿತ ವಿದ್ಯುತ್ ಸೌಲಭ್ಯವನ್ನು ಮುಂದುವರಿಸಬೇಕು. ತೆಂಗು ಬೆಳೆಗಾರರ ಸಮಸ್ಯೆಗಳನ್ನು ಆಲಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ರೈತ ಸಂಘಟನೆಗಳನ್ನು ಒಳಗೊಂಡ ಜಂಟಿ ಸಭೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಸಬೇಕು ಎಂದು ಎಂದು ಒತ್ತಾಯಿಸಿದರು.


ಸಮಾವೇಶದಲ್ಲಿ ತೆಂಗು ಮತ್ತು ಕೊಬ್ಬರಿಗೆ ಬೆಲೆಗಳು ಪಾತಾಳಕ್ಕೆ ಕುಸಿದಿರುವ ಬಗ್ಗೆ ಬೆಳೆಗಾರರು ತಮ್ಮ ಅಳಲು ತೋಡಿಕೊಂಡರು. ರೈತರು ಮತ್ತು ರೈತ ಮುಖಂಡರು ತೆಂಗು ಬೆಳೆಗಾರರ ಸಮಸ್ಯೆಗಳು ಮತ್ತು ಪರಿಹಾರ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಸಮಾವೇಶದ ಬಳಿಕ ರೈತ ಸಂಘದ ಕಾರ್ಯಕರ್ತರು, ಮೆರವಣಿಗೆ ಸಾಗಿ ತಾಲೂಕು ಕಚೇರಿ ಎದುರು ಕೆಲಕಾಲ ಪ್ರತಿಭಟಿಸಿದರಲ್ಲದೆ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ-ರಾಜ್ಯ ಸರ್ಕಾರಗಳಿಗೆ ತಹಸೀಲ್ದಾರ್ ಬಿ.ಎಂ.ಗೋವಿಂದರಾಜು ಮೂಲಕ ಮನವಿ ಸಲ್ಲಿಸಿದರು.


ತುಮಕೂರು ಜಿಲ್ಲಾ ಮುಖಂಡರಾದ ಚನ್ನಬಸಣ್ಣ, ತಾಲೂಕು ಮುಖಂಡರಾದ ವಾಸುದೇವ ಕಲ್ಕೆರೆ, ವಳಗೆರಳ್ಳಿ ರಾಮಚಂದ್ರ, ಕೃಷ್ಣಗೌಡ, ಕಬ್ಬಳಿ ದೊರೆಸ್ವಾಮಿ, ಚೌಡೇನಹಳ್ಳಿ ಕೃಷ್ಣಗೌಡ, ಮಿಲ್ಟಿ ಮಂಜು, ರಾಜ್ಯ ರೈತ ಸಂಘದ ಹರೀಶ್, ಮೀಸೆ ಮಂಜಣ್ಣ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net