ರೈತ ಕುಟುಂಬದಿಂದ ಗೋವಿಗೆ ಸೀಮಂತ

04M.D.R.4
Published on

ಮದ್ದೂರು: ಪಟ್ಟಣದ ಹಳೇ ಒಕ್ಕಲಿಗರ ಬೀದಿ ನಿವಾಸಿ ಪ್ರಗತಿಪರ ರೈತ ಎಂ.ಎ.ಕೃಷ್ಣ (ಕಿಟ್ಟಿ) ತನ್ನ ನೆಚ್ಚಿನ ಗೋವಿಗೆ ಶಾಸ್ತ್ರೋಕ್ತವಾಗಿ ಕುಟುಂಬ ಸಮೇತರಾಗಿ ಸೀಮಂತ ನೆರವೇರಿಸಿದರು.

ಮನೆಯಲ್ಲಿ ಹುಟ್ಟಿ ಬೆಳೆದ 3 ವರ್ಷದ ಪ್ರಾಯದ ಎರಡು ಹಲ್ಲಿನ ಹಳ್ಳಿಕಾರ್ ತಳಿಯ ನೆಚ್ಚಿನ ಹಸುವಿಗೆ ಒಂಭತ್ತು ತಿಂಗಳ ಗರ್ಭವತಿ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿ ಗಮನ ಸೆಳೆದರು.

ಕೃಷ್ಣ-ಗಾಯತ್ರಿ ದಂಪತಿ ತಮ್ಮ ಕುಟುಂಬದ ಹಿರಿಯರಿಂದ ಆರಂಭವಾದ ಗೋ ಪ್ರೀತಿಯನ್ನು ಇಂದಿಗೂ ಮುಂದುವರಿಸಿದ್ದು ತಮ್ಮ ಮಕ್ಕಳಿಗೂ ಗೋವುಗಳ ಆರೈಕೆ, ಪ್ರೀತಿ, ಅಕ್ಕರೆಗಳನ್ನು ಉಣಬಡಿಸಿದ್ದಾರೆ.

ಹಸು ಒಂಬತ್ತು ತಿಂಗಳ ಗರ್ಭವತಿಯಾಗಿದ್ದು ಸೋಮವಾರ ಹಾಜರಿದ್ದ ಕುಟುಂಬ ಸದಸ್ಯರು ಮತ್ತು ನೆರೆಹೊರೆಯ ಮುತ್ತೈದೆಯರೊಡಗೂಡಿ ಸಂಭ್ರಮದಿಂದ ಸೀಮಂತ ಮತ್ತು ಆರತಿಶಾಸ್ತ್ರ ಆಚರಿಸಿದರು.

ತಮ್ಮ ಕೊಟ್ಟಿಗೆಯಲ್ಲಿ ಸದಾಕಾಲ ಇರುವ ಹಳ್ಳಿಕಾರ್ ತಳಿಯ ಹಸುಗಳನ್ನು ಪಾಲನೆ ಮಾಡುವ ಕೃಷ್ಣ ಮತ್ತು ಕುಟುಂಬದವರು ತಮ್ಮ ಪಶುಗಳನ್ನು ಕುಟುಂಬ ಸದಸ್ಯರಂತೆಯೇ ಪರಿಗಣಿಸುತ್ತಲೇ ನೆರೆ ಹೊರೆ ಹಾಗೂ ಇತರ ರೈತರ ಗಮನ ಸೆಳೆದಿದ್ದಾರೆ.

ಹನ್ನೆರಡು ತಟ್ಟೆಗಳಲ್ಲಿ ತುಂಬಿಟ್ಟ ಸೀರೆ, ಕುಪ್ಪಸ, ಬಳೆ, ಅರಿಶಿಣ, ಕುಂಕುಮ, ಡ್ರೈಫ್ರೂಟ್ಸ್, ವಿವಿಧ ಬಗೆಯ ಹಣ್ಣುಗಳು, ಕೊಬ್ಬರಿ, ಬೆಲ್ಲ, ತೆಂಗಿನಕಾಯಿ, ಒಬ್ಬಟ್ಟು, ತನ್ನ ಹಸುವಿಗೆ ಪ್ರಿಯವಾದ ಕಡಲೆಕಾಯಿ ಹಿಂಡಿ ಮತ್ತಿತರ ಸಾಮಗ್ರಿಗಳನ್ನು ಒಪ್ಪವಾಗಿ ಜೋಡಿಸಿ ಶಾಸ್ತ್ರದ ವೇಳೆ ಸಮರ್ಪಿಸಿದರು.

ಮುತ್ತೈದೆಯರು ಹೂಗಳಿಂದ ಸಿಂಗರಿಸಿದ್ದ ಗೋವಿಗೆ ಪೂಜೆ ಸಲ್ಲಿಸಿ ಆರತಿ ನೆರವೇರಿಸಿ ಶುಭ ಹಾರೈಸಿದರು. ನೆರೆದಿದ್ದವರಿಗೆ ಪ್ರಸಾದ ವಿತರಿಸಲಾಯಿತು.

ಪ್ರಗತಿಪರ ರೈತ ಎಂ.ಎ.ಕೃಷ್ಣ ಮಾತನಾಡಿ, ತಮ್ಮ ಕುಟುಂಬದ ಪೂರ್ವಿಕರಾದ ಅಂಕಯ್ಯ ಅವರ ಕಾಲದಿಂದಲೂ ಪಶುಪಾಲನೆ ಸಾಗಿದ್ದು, ತನ್ನ ಮನೆಯಲ್ಲಿ ಹುಟ್ಟಿ ಬೆಳೆದ ಗೋವಿಗೆ ಹಿಂದು ಸಂಪ್ರದಾಯದಂತೆ ಸೀಮಂತ ಕಾರ್ಯ ನೆರವೇರಿಸಿರುವುದು ಸಂತಸದ ವಿಚಾರವಾಗಿದೆ. ಇಂದಿನ ಯುವ ಜನಾಂಗ ಗೋವುಗಳನ್ನು ಆರೈಕೆ ಮಾಡಿ ಪಶು ಸಂಪತನ್ನು ಹೆಚ್ಚಿಸುವುದರ ಮೂಲಕ ಸ್ವ ಉದ್ಯೋಗಗಳನ್ನು ಕಂಡುಕೊಳ್ಳಬೇಕು ಎಂದರು.

ಎಂ.ಎ.ಕೃಷ್ಣ ಅವರ ಕುಟುಂಬ ವರ್ಗ ಹಾಗೂ ಸ್ಥಳೀಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net