

ಹಾವೇರಿ: ಕರೊನಾ ಲಾಕ್ಡೌನ್ ಪರಿಣಾಮವು ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ನೇರವಾಗಿ ತಟ್ಟಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೇಷ್ಮೆ ಗೂಡುಗಳನ್ನು ಮಾರಾಟಕ್ಕೆ ಸಾಗಿಸಲು ಸರ್ಕಾರ ಅನುಮತಿ ನೀಡಿದ್ದರೂ ಯೋಗ್ಯ ದರವಿಲ್ಲದೇ ರೈತರು ಕಂಗಾಲಾಗಿದ್ದಾರೆ.
ಗೂಡುಗಳು ಹಾಳಾಗದಂತೆ ತಡೆಯಲು ರೈತರು ಮನೆಯಲ್ಲಿಯೇ ಸಂಗ್ರಹಿಸಿಟ್ಟುಕೊಂಡು ಬಿಸಿಲಿನಲ್ಲಿ ಒಣಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೂ ಕೆಲ ಗೂಡುಗಳಿಂದ ಮರಿಗಳು ಹೊರಬಂದು ರೈತರು ನಷ್ಟ ಅನುಭವಿಸುವಂತಾಗಿದೆ.
ರೇಷ್ಮೆ ಮಾರಾಟಕ್ಕೆ ಸರ್ಕಾರ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 700 ರೂ. ಇದ್ದ ದರ ಈಗ 220ರಿಂದ 300 ರೂ.ಗೆ ಕುಸಿದಿದೆ. ಇದರಿಂದ ರೈತರಿಗೆ ಸರ್ಕಾರ ಮಾರಾಟಕ್ಕೆ ಅನುಮತಿ ನೀಡಿದರೂ ಅದು ಪ್ರಯೋಜನಕ್ಕೆ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ 234 ಗ್ರಾಮಗಳಲ್ಲಿ 2,500 ರೈತರು ಒಟ್ಟು 6 ಸಾವಿರ ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆದಿದ್ದಾರೆ. ಪ್ರತಿ ತಿಂಗಳು 100 ಟನ್ ನಷ್ಟು ರೇಷ್ಮೆ ಗೂಡು ಉತ್ಪಾದನೆಯಾಗುತ್ತಿದೆ. ಫೆಬ್ರವರಿ, ಮಾರ್ಚ್ನಲ್ಲಿ ರೈತರು 200 ಟನ್ ನಷ್ಟು ರೇಷ್ಮೆ ಗೂಡುಗಳನ್ನು ಉತ್ಪಾದಿಸಿದ್ದಾರೆ. ಆದರೆ, ಸೂಕ್ತ ದರ ಹಾಗೂ ಲಾಕ್ಡೌನ್ನಿಂದ ಮಾರಾಟ ಮಾಡಲು ಹಿಂದೇಟು ಹಾಕುವಂತಾಗಿದೆ.
ಒಣಗಿಸಲು ಮುಂದಾಗಿರುವ ರೈತರು: ರೇಷ್ಮೆ ಗೂಡುಗಳನ್ನು ಉತ್ಪಾದಿಸಿದ ಒಂದು ವಾರದೊಳಗೆ ಅವುಗಳನ್ನು ಮಾರಾಟ ಮಾಡಬೇಕು. ಇಲ್ಲವಾದರೆ ಗೂಡಿನೊಳಗಿನ ಮರಿಗಳು ಗೂಡುಗಳನ್ನು ಒಡೆದುಕೊಂಡು ಹೊರಬರುತ್ತವೆ. ಹೀಗಾದರೆ ಗೂಡುಗಳು ಸಂಪೂರ್ಣ ಹಾಳಾಗಿ ಹೋಗುತ್ತವೆ. ಕಾರ್ಖಾನೆಯವರಿಗೆ ಮಾರಾಟ ಮಾಡಿದರೆ ಅವರು ಯಂತ್ರಗಳಲ್ಲಿ ಗೂಡುಗಳನ್ನು ಒಣಗಿಸಿ ಮೂರ್ನಾಲ್ಕು ತಿಂಗಳು ಕಾಲ ಸಂರಕ್ಷಿಸುತ್ತಾರೆ. ಈಗ ಗೂಡುಗಳು ಮಾರಾಟವಾಗದೇ ಇರುವುದರಿಂದ ಬಿಸಿಲಿನಲ್ಲಿ ಗೂಡುಗಳನ್ನು ಒಣಗಿಸಲು ರೈತರು ಮುಂದಾಗಿದ್ದಾರೆ. ಆದರೂ ಕೆಲ ಗೂಡುಗಳಿಂದ ಮರಿಗಳು ಹೊರಗೆ ಬರುತ್ತಿವೆ. ಇದರ ನಷ್ಟದ ಜೊತೆಗೆ ಗೂಡುಗಳನ್ನು ಒಣಗಿಸಿ ಸಂಗ್ರಹಿಸುವುದರಿಂದ ಮೊದಲಿಗಿಂತ ತೂಕದಲ್ಲಿ ಶೇ. 20ರಿಂದ 25ರಷ್ಟು ಕಡಿಮೆಯಾಗಿ ನಷ್ಟವಾಗುತ್ತಿದೆ. ಒಟ್ಟಾರೆ ಕರೊನಾ ಪರಿಣಾಮದಿಂದ ರೇಷ್ಮೆ ಬೆಳೆಗಾರರಿಗೆ ಮಾಡಿದ ಖರ್ಚು ಬಾರದಂತಹ ಸ್ಥಿತಿ ನಿರ್ವಣವಾಗಿದೆ.
ಕಾರ್ಖಾನೆಗಳಿಗೆ ವರ: ಲಾಕ್ಡೌನ್ನ ಪ್ರಯೋಜನವನ್ನು ಪಡೆಯಲು ಕೆಲ ಕಾರ್ಖಾನೆಯವರು ಮುಂದಾಗಿರುವ ಆರೋಪಗಳು ರೈತರಿಂದ ಕೇಳಿಬಂದಿವೆ. ಕಾರ್ಖಾನೆಯವರಿಗೆ ವೈಜ್ಞಾನಿಕವಾಗಿ ಗೂಡುಗಳನ್ನು ಒಣಗಿಸಲು ಎಲ್ಲ ಅವಕಾಶಗಳಿವೆ. ಆದರೂ ಅವರು ರೈತರಿಂದ ಯೋಗ್ಯ ದರದಲ್ಲಿ ಗೂಡುಗಳನ್ನು ಖರೀದಿಸದೇ ನಾನಾ ಕಾರಣ ನೀಡಿ ಕಡಿಮೆ ದರಕ್ಕೆ ಖರೀದಿಸುತ್ತಿದ್ದಾರೆ. ಪ್ರತಿವರ್ಷ ಬೇಸಿಗೆಯಲ್ಲಿ ಮಾತ್ರ ರೇಷ್ಮೆ ಗೂಡುಗಳಿಗೆ ಉತ್ತಮ ದರ ಸಿಗುತ್ತದೆ. ಮಳೆಗಾಲ ಆರಂಭವಾದರೆ ನೂಲು ಸರಿಯಾಗಿ ಬರುವುದಿಲ್ಲ ಎಂದು ದರ ಕಡಿಮೆ ಮಾಡುತ್ತಾರೆ. ಈ ವರ್ಷದ ಬೇಸಿಗೆಯಲ್ಲಿಯೇ ಈ ಸಮಸ್ಯೆ ಉದ್ಭವವಾಗಿರುವುದರಿಂದ ಇದರ ಲಾಭವನ್ನು ಪಡೆಯಲು ಮುಂದಾಗಿದ್ದಾರೆ ಎಂದು ರೈತರು ದೂರುತ್ತಾರೆ.
ರೇಷ್ಮೆಗೆ ಬೇಸಿಗೆಯಲ್ಲಿಯೇ ಅತಿಹೆಚ್ಚು ದರ ಸಿಗುತ್ತಿತ್ತು. ಲಾಕ್ಡೌನ್ ಪರಿಣಾಮದಿಂದ 700 ರೂ.ಗೆ ಕೆಜಿಯಿದ್ದ ದರ ಈಗ ಸ್ಥಳೀಯ ಮಾರುಕಟ್ಟೆಯಲ್ಲಿ 200ರಿಂದ 220 ರೂ.ಗೆ ಕುಸಿದಿದೆ. ಹೀಗಾಗಿ, ಮನೆಯಲ್ಲಿಯೇ ಒಣಗಿಸಿ ಸಂಗ್ರಹಿಸುತ್ತಿದ್ದೇವೆ. ಸರ್ಕಾರ ಮಾರಾಟಕ್ಕೆ ಅನುಮತಿ ನೀಡುವ ಜೊತೆಗೆ ದರ ಇಳಿಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕನಿಷ್ಠ 500 ರೂ. ಗಳಿಂದ 600 ರೂ.ಗಳ ದರವನ್ನು ಸರ್ಕಾರ ನಿಗದಿಗೊಳಿಸಿದರೆ ಮಾತ್ರ ರೈತರು ಉಳಿಯಲು ಸಾಧ್ಯ. | ರುದ್ರೇಶ ಚಿನ್ನಣ್ಣನವರ, ರೇಷ್ಮೆ ಬೆಳೆದ ರೈತ ಜಿಲ್ಲಾಡಳಿತದಿಂದ ಈಗಾಗಲೇ ರೇಷ್ಮೆ ಬೆಳೆಯನ್ನು ಮಾರಾಟ ಮಾಡಲು ಜಿಲ್ಲೆಯೊಳಗೆ ಸಾಕಷ್ಟು ಪಾಸ್ ವಿತರಿಸಿದ್ದೇವೆ. ಹೊರ ಜಿಲ್ಲೆಗೆ ಸಾಗಿಸಲು 10 ವಾಹನಗಳಿಗೆ ಪಾಸ್ ಕೊಟ್ಟಿದ್ದೇವೆ. ದರ ಕಡಿಮೆಯಾಗಿರುವುದರಿಂದ ಗೂಡುಗಳನ್ನು ಒಣಗಿಸಿಡಲು ರೈತರಿಗೆ ಸಲಹೆ ನೀಡಿದ್ದೇವೆ. ಒಣಗಿಸುವುದರಿಂದ 4ರಿಂದ 5 ತಿಂಗಳು ಇಟ್ಟುಕೊಳ್ಳಬಹುದು. ಸ್ಥಳೀಯ ನೂಲು ಕಾರ್ಖಾನೆಯವರಿಗೆ ರೈತರ ಗೂಡು ಒಣಗಿಸಿಕೊಡಲು ಸೂಚಿಸಿದ್ದೇವೆ. | ಮಾಲತೇಶ ಪಾಟೀಲ, ಸಹಾಯಕ ನಿರ್ದೇಶಕರು ಹಾವೇರಿ ವಿಭಾಗ