ರೇಷ್ಮೆ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ

23 june tnp 03
Published on

ತಿ.ನರಸೀಪುರ: ಪಟ್ಟಣದ ಏಕೈಕ ಸರ್ಕಾರಿ ರೇಷ್ಮೆ ಕಾರ್ಖಾನೆಯನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ತೆರವುಗೊಳಿಸುವ ಕಾರ್ಯವನ್ನು ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿ ಶನಿವಾರ ಕಾರ್ಖಾನೆ ಮುಂಭಾಗ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕೆಎಸ್‌ಐಸಿ ಕಾರ್ಖಾನೆಯನ್ನು ಕ್ರೀಡಾಂಗಣವನ್ನಾಗಿ ಪರಿವರ್ತಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಕಾರ್ಖಾನೆಯ ಹೊರಗುತ್ತಿಗೆ ಕಾರ್ಮಿಕರು ವಾರದ ಕೊನೆಯ ದಿನದ ಕೆಲಸ ಮುಗಿದ ಬಳಿಕ ಕಾರ್ಖಾನೆ ಮುಂಭಾಗ ಜಮಾವಣೆಗೊಂಡು ಪ್ರತಿಭಟಿಸಿದರು. ಕ್ರೀಡಾಂಗಣವನ್ನು ಬೇರೆ ಯಾವುದಾದರೂ ಜಾಗದಲ್ಲಿ ಮಾಡಿ. ಕಾರ್ಖಾನೆ ಮೇಲೆ ಅವಲಂಬಿತವಾಗಿರುವ 250ಕ್ಕೊ ಹೆಚ್ಚು ಕಾರ್ಮಿಕ ಕುಟುಂಬಗಳನ್ನು ಉಳಿಸಬೇಕೆಂದು ಆಗ್ರಹಿಸಿದರು.

ತಿ.ನರಸೀಪುರ ಮತ್ತು ವರುಣ ವಿಧಾನಸಭಾ ಕ್ಷೇತ್ರಕ್ಕೆ ಇರುವುದು ಒಂದೇ ಕೆಎಸ್‌ಐಸಿ ಕಾರ್ಖಾನೆ. ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್, ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ದಯಮಾಡಿ ಇದನ್ನು ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸಲು ಎಲ್ಲ ರೀತಿಯ ಸಿದ್ಧತೆ ನಡೆದಿದ್ದು, ಸರ್ಕಾರದಿಂದ ಯಂತ್ರೋಪಕರಣಗಳು ಬರಬೇಕಾಗಿದೆ. ಬಂದ ಮೇಲೆ ಇನ್ನೂ ಒಂದಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಕುಟುಂಬಗಳು ಸಹ ಜೀವನ ಕಟ್ಟಿಕೊಳ್ಳಲು ಅನುಕೂಲವಾಗಲಿದೆ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಬಡ ಕುಟುಂಬಗಳ ಮೇಲೆ ಕರುಣೆ ತೋರಿಸಿ ನಮ್ಮ ಬದುಕಿಗೆ ದಾರಿ ದೀಪವಾಗಬೇಕೆಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net