

ಕಲಬುರಗಿ: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಕಟ್ಟಡದಲ್ಲಿ ಶನಿವಾರ ಹಾಗೂ ಭಾನುವಾರ ರುಮಾಟಲಜಿಸ್ಟ್ ಸಮಾವೇಶ (ಕ್ರಾಕಾನ್-೨೦೨೩) ಆಯೋಜಿಸಲಾಗಿದೆ. ದೇಶದ ವಿವಿಧೆಡೆಯ ಪರಿಣತ ರುಮಾಟಲಿಜಸ್ಟ್ಗಳು ಈ ಸಮಾವೇಶದಲ್ಲಿ ಪಾಲ್ಗೊಂಡು, ವಿವಿಧ ಗೋಷ್ಠಿ, ಉಪನ್ಯಾಸಗಳಲ್ಲಿ ವಿಷಯ ಮಂಡಿಸಲಿದ್ದಾರೆ.
ಕರ್ನಾಟಕ ರುಮಾಟಲಿಜಸ್ಟ್ ಅಸೋಷಿಯೇಷನ್(ಕೆಆರ್‌ಎ) ಇಲ್ಲಿನ ಎಂಆರ್‌ಎAಸಿ ಮೆಡಿಸಿನ್ ವಿಭಾಗ ಮತ್ತು ಎಪಿಐ ಕಲಬುರಗಿ ಸಹಯೋಗದಿಂದ ಮೊದಲ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಮಾವೇಶ ಸಂಘಟಿಸಿದೆ. ಶನಿವಾರ ಬೆಳಗ್ಗೆ ೧೧.೧೫ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸಮಾವೇಶ ಉದ್ಘಾಟಿಸುವರು ಎಂದು ಸಮಾವೇಶ ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ಜೀವಣಗಿ ತಿಳಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸುವರು.ಕೆಬಿಎನ್ ವಿವಿ ಪ್ರೊಫೆಸರ್ ಡಾ.ಪಿ.ಎಸ್.ಶಂಕರ್, ಎಂ.ಆರ್.ಮೆಡಿಕಲ್ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಭರತ್ ಕೋಣಿನ್, ಕಲಬುರಗಿ ಎಪಿಐ ಅಧ್ಯಕ್ಷ ಡಾ.ನಾಗರಾಜ ಕೋಥ್ಲಿ, ಅರ್ಥೋಪೆಡಿಕ್ ಸೊಸೈಟಿ ಅಧ್ಯಕ್ಷ ಡಾ.ಕಿಶೋರ್ ಮೇಂಗಜಿ, ಡಾ.ಕೆ.ಎಂ.ಮಹೇಂದ್ರನಾಥ್, ಡಾ.ಬಿ.ಜಿ.ಧರ್ಮಾನಂದ, ಡಾ.ಚಂದ್ರಶೇಖರ ಎಸ್, ಡಾ.ವಿನೀತಾ ಶೋಭಾ, ಡಾ.ರಮೇಶ ಜೋಯಿಸ್, ಡಾ.ಶಿವಪ್ರಸಾದ್ ಬಿ.ಎನ್, ಡಾ.ರಾಹುಲ್ ಲಡ್ಡಾ, ಡಾ.ಶಿವಪುತ್ರಪ್ಪ ಘಂಟಿ, ಡಾ.ಎಸ್.ನಾಗರಾಜ ಇತರರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಸಂಧಿವಾತ(ರುಮಾಟಲಜಿ) ಕೀಲುಗಳ ಮೇಲೆ ಪರಿಣಾಮ ಬೀರುವ ದೊಡ್ಡ ಕಾಯಿಲೆ. ಕಲ್ಯಾಣ ಕರ್ನಾಟಕದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕಲಬುರಗಿಯಲ್ಲಿ ೧ ಲಕ್ಷಕ್ಕೂ ಹೆಚ್ಚು ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಂಧಿವಾತದಲ್ಲಿ ೧೦೦ಕ್ಕೂ ಹೆಚ್ಚು ವಿಧಗಳಿವೆ. ಈ ಭಾಗದ ನೀರು ಮತ್ತು ವಾತಾವರಣಕ್ಕೆ ಸಂಧಿವಾತ ಹೆಚ್ಚಾಗಿ ಕಾಣಿಸುತ್ತಿದೆ. ಈ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಇದರ ಗುಣಲಕ್ಷಣಗಳನ್ನು ಅರಿಯುವ ಮತ್ತು ಪರಿಹಾರ ಮಾಡುವ ಕೆಲಸ ವೈದ್ಯರು ಮಾಡುತ್ತಿದ್ದಾರೆ. ಈ ಸಾದಕ-ಬಾಧಕ ಕುರಿತು ಸಮಗ್ರ ಚರ್ಚೆ ನಡೆಸಲು ಸಮಾವೇಶ ಆಯೋಜಿಸಲಾಗಿದೆ. ದೇಶದ ಹೆಸರಾಂತ ವೈದ್ಯರು ಪಾಲ್ಗೊಂಡು ಬೆಳಕು ಚೆಲ್ಲಲಿದ್ದಾರೆ ಎಂದು ವಿವರಿಸಿದ್ದಾರೆ.
ಖ್ಯಾತ ವೈದ್ಯರು ಎರಡು ದಿನದ ಗೋಷ್ಠಿ, ಸಂವಾದದಲ್ಲಿ ಚರ್ಮ ಮತ್ತು ಸಂಧಿವಾತ ಕುರಿತು ಮಾತನಾಡಲಿದ್ದಾರೆ. ಅರ್ಥಪೂರ್ಣ ವಿಷಯ ಮಂಡಿಸಲಿದ್ದಾರೆ. ಸಮಾವೇಶದ ಕೊನೆಯಲ್ಲಿ ಕ್ವಿಜ್ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.