

ಬೇಲೂರು: ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿರುವ ಶ್ರೀ ಪಾಂಡುರಂಗ ದೇವಾಲಯದಲ್ಲಿ 39ನೇ ವರ್ಷದ ದಿಂಡಿ ಉತ್ಸವದ ಅಂಗವಾಗಿ ರುಕ್ಮಿಣಿ-ಪಾಂಡುರಂಗ ಸ್ವಾಮಿ ಕಲ್ಯಾಣೋತ್ಸವವು ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಬೆಳಗ್ಗೆಯಿಂದಲೇ ಪಾಂಡುರಂಗ ದೇಗುಲದಲ್ಲಿ ಪಾಂಡುರಂಗ ಮತ್ತು ರುಕ್ಮಿಣಿ ದೇವರ ವಿಗ್ರಹಗಳನ್ನು ಸುಂದರ ವಸ್ತ್ರಾಭರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಅರ್ಚಕರು ವೇದ ಮಂತ್ರ ಘೋಷಗಳನ್ನು ಪಠಿಸುತ್ತಾ, ಸಾಂಪ್ರದಾಯಿಕ ವಿವಾಹ ವಿಧಿ ವಿಧಾನಗಳನ್ನು ನೆರವೇರಿಸಿದರು. ಇದೇ ಸಂದರ್ಭ ಹೋಮ-ಹವನ, ಮಂಗಳಾರತಿ ಮತ್ತು ಭಜನೆಗಳು ನಡೆದವು. ದೇವರ ಕಲ್ಯಾಣೋತ್ಸವದ ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಭಗವಂತ್ ರಾವ್ ಗುಜ್ಜರ್ ಮಾತನಾಡಿ, ಮೊದಲ ಬಾರಿಗೆ ನಮ್ಮ ಸಮಾಜದಿಂದ ಶ್ರೀ ರುಕ್ಮಿಣಿ-ಪಾಂಡುರಂಗ ಕಲ್ಯಾಣೋತ್ಸವವನ್ನು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಗಿದೆ. ಸಮಾಜದಲ್ಲಿ ಸೌಹಾರ್ದತೆ, ಧಾರ್ಮಿಕ ಭಾವನೆ ಹೆಚ್ಚಿಸಲು ಇದು ಸಹಾಯವಾಗಿದೆ. ದೇವಸ್ಥಾನದ ಆಡಳಿತ ಮಂಡಳಿ, ಸ್ವಯಂ ಸೇವಕರು ಮತ್ತು ಭಕ್ತರ ಸಹಯೋಗದಿಂದ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಭಾನುವಾರ ನಮ್ಮ ಸಮಾಜದಿಂದ ದಿಂಡಿ ಉತ್ಸವವಿದ್ದು ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಗೌರವಾಧ್ಯಕ್ಷ ಆನಂದ್ ಚಿಂಬಲ್ಕರ್, ಉಪಾಧ್ಯಕ್ಷ ಮಂಜುನಾಥ್ ಇರೊಸ್ಕಾರ್, ಕಾರ್ಯದರ್ಶಿ ಗಣೇಶ್ ರಾವ್ ಪೂಕಾಳೆ, ಸಹ ಕಾರ್ಯದರ್ಶಿ ವಿಶ್ವನಾಥ್ ಗುಜ್ಜರ್, ಖಜಾಂಚಿ ಗಣೇಶ್ ಚಿಂಬಳ್ಕರ್, ಕಾನೂನು ಸಲಹೆಗಾರ ಹರೀಶ್ ಚಿಂಬಳ್ಕರ್, ಮುಖ್ಯ ಅರ್ಚಕ ರಾಘವೇಂದ್ರ ಭಟ್, ಕೆ.ಆರ್.ಮಂಜುನಾಥ್, ಶೇಷಾದ್ರಿ ಭಟ್ ಇತರರಿದ್ದರು.