

ಬೇಲೂರು: ಬೇಸಿಗೆ ಶಿಬಿರಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿರುವ ರಿಚ್ ಟು ಲೈಫ್ ಟ್ರಸ್ಟ್ ಕಾರ್ಯ ಶ್ಲಾಘನೀಯವಾಗಿದೆ ಎಂದು ರೋಟರಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಹೇಳಿದರು.
ರಿಚ್ ಟು ಲೈಫ್ ಟ್ರಸ್ಟ್ ವತಿಯಿಂದ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದಲ್ಲಿ 5ನೇ ವರ್ಷದ ಚಿಣ್ಣರ ಮೇಳದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಬೇಸಿಗೆ ಶಿಬಿರಗಳೆಂದರೆ ಕೇವಲ ಹಣ ಗಳಿಕೆಗೆ ಎನ್ನುವ ದಿನಗಳಲ್ಲಿ ರಿಚ್ ಟು ಲೈಫ್ ಟ್ರಸ್ಟ್‌ನ ಸಂಸ್ಥಾಪಕಿ ಕೃತಿಕಾ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆಯೇ ನಮ್ಮ ಗುರಿ ಎಂಬಂತೆ ಗ್ರಾಮೀಣ ಭಾಗದ ಮಕ್ಕಳಿಗೆ ಹಲವಾರು ಕ್ರೀಡಾ ಚಟುಚಟಿಕೆ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವ ಕೆಲಸ ಮಾಡುವುದರೊಂದಿಗೆ, ಈ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಹಾಗೂ ಚಿತ್ರಕಲೆ, ನೃತ್ಯ, ಯೋಗಾಸನ, ಕರಾಟೆ, ಸಂಗೀತ ಸೇರಿದಂತೆ ಇತರ ಸದಭಿರುಚಿ ಕಾರ್ಯಕ್ರಮಗಳ ಮೂಲಕ ಕಂಪ್ಯೂಟರ್ ತರಬೇತಿ ನೀಡಿ ಸಮಾಜ ಸೇವೆಯಲ್ಲಿ ತೊಡಗಿರುವುದು ಅವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದ್ದು, ಅವರಿಗೆ ನಮ್ಮ ರೋಟರಿ ಸಂಸ್ಥೆಯಿಂದಲೂ ಸಹಕಾರ ನೀಡಲಾಗುವುದು ಎಂದರು.
ಟ್ರಸ್ಟ್ ಸಂಸ್ಥಾಪಕಿ ಕೃತಿಕಾ ಮಾತನಾಡಿ, ಬೇಸಿಗೆ ಶಿಬಿರಗಳು ಶಾಲಾ ಚಟುವಟಿಕೆಗಿಂತಲೂ ವಿಭಿನ್ನವಾಗಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ. 5 ವರ್ಷದಿಂದ ನಮ್ಮ ಸಂಸ್ಥೆ ಸರ್ಕಾರಿ ಶಾಲೆಯನ್ನು ದತ್ತು ಪಡೆದು ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆ ಸೇರಿದಂತೆ ನೃತ್ಯ, ಕಂಪ್ಯೂಟರ್ ತರಬೇತಿ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಿ ಪಠ್ಯ ಪುಸ್ತಕ, ಲೇಖನ ಸಾಮಗ್ರಿಗಳನ್ನು ನೀಡುತಿದ್ದೇವೆ. ಸಂಘ-ಸಂಸ್ಥೆಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮೀಣ ಭಾಗದ ಮಕ್ಕಳತ್ತಲೂ ಗಮನ ಹರಿಸಬೇಕು ಎಂದರು.
ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷರಾದ ಗಣೇಶ್, ವೈ.ಡಿ.ಲೋಕೇಶ್, ಸಂದೇಶ್, ಶಿಕ್ಷರಾದ ಸೋಮಶೇಖರ್, ತಾರಾ, ರಿಚ್ ಟು ಲೈಫ್ ಟ್ರಸ್ಟ್ ಉಪಾಧ್ಯಕ್ಷೆ ಮಂಜುಳಾ, ಸಂಸ್ಥೆಯ ಇಂದಿರಾ ಶ್ರೀನಿವಾಸ್, ಪುಟ್ಟಸ್ವಾಮಿ, ರುದ್ರೇಶ್, ಪ್ರತಾಪ್, ಸಚಿನ್, ಮಾಜಿ ಸೈನಿಕ ಶಾಂತಕುಮಾರ್, ನಾಗೇಶ್ ಮತ್ತಿತರರಿದ್ದರು.