

ಕಲಬುರಗಿ: ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾದ ಪ್ರಕರಣಗಳನ್ನು ಶೀಘ್ರ ಬಗೆಹರಿಸಲು ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಡಿ.೯ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ, ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಎಸ್.ನಾಗಶ್ರೀ ತಿಳಿಸಿದರು.
ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದಂತೆ ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ಈಗಾಗಲೇ ಕೆಲ ಪ್ರಕರಣಗಳಿಗೆ ನ್ಯಾಯಾಧೀಶರು ಪ್ರಕ್ರಿಯೆ ಆರಂಭಿಸಿದ್ದು, ಡಿ.೯ ರವೇಳೆಗೆ ಬಗೆಹರಿಯಲಿವೆ. ಎಲ್ಲ ಕಕ್ಷಿದಾರರು, ಸಾರ್ವಜನಿಕರು, ನ್ಯಾಯವಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅದಾಲತ್‌ನಲ್ಲಿ ಉಭು ಕಕ್ಷಿಕಾರರಿಗೆ ರಾಜಿಗೆ ಮಾರ್ಗದರ್ಶನ, ಇಲ್ಲಿನ ತೀರ್ಪಿಗೆ ಯಾವುದೇ ಮೇಲ್ಮನವಿ, ಖರ್ಚು, ವೆಚ್ಚ ಇರುವುದಿಲ್ಲ, ಕಡಿಮೆ ಖರ್ಚಿನಲ್ಲಿ ಶೀಘ್ರದಲ್ಲಿ ತೀರ್ಪು ದೊರೆಯಲಿದೆ, ನೇರ ಅಥವಾ ವಕೀಲರ ಮೂಲಕ ಭಾಗವಹಿಸಬಹುದು, ರಾಜಿ ಮೂಲಕ ಪ್ರಕರಣ ಬಗೆಹರಿಯುವುದರಿಂದ ಬಾಂಧವ್ಯ ಉಳಿಯಲಿದೆ ಎಂದರು.
ಕೆಲವು ಅಪರಾಧ ಪ್ರಕರಣಗಳನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು, ರಾಜಿ ಮೂಲಕ ಇತ್ಯರ್ಥ ಮಾಡಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕ ಪೂರ್ಣವಾಗಿ ಹಿಂದಿರುಗಿಸಲಾಗುವುದು, ಇಲ್ಲಿ ಬಗೆಹರಿಸಿದ ಪ್ರಕರಣಗಳಿಗೆ ಮೇಲ್ಮನವಿಯ ಅವಕಾಶವಿಲ್ಲ ಎಂದು ತಿಳಿಸಿದರು.