

ಬಾಗಲಕೋಟೆ: ಯುವಜನರಲ್ಲಿ ಮತದಾನದ ಮಹತ್ವ ಸಾರುವ ಉದ್ದೇಶದಿಂದ ಜ.೨೪ ರಂದು ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ೧೫ನೇ ರಾಷ್ಟ್ರೀಯ ಮತದಾರರ ದಿನ ಆಚರಿಸುವ ಕುರಿತು ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಜ.೨೫ ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ವರ್ಷ ಜ.೨೫ ರಂದು ಸರ್ಕಾರಿ ರಜೆ ಇರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಜ.೨೪ ರಂದು ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು ಎಂದರು.
ಮತಗಟ್ಟೆ ಮಟ್ಟದಲ್ಲಿ ಹಾಗೂ ಕಾಲೇಜುಗಳಲ್ಲಿ ವ್ಯಾಪಕವಾಗಿ, ಪರಿಣಾಮಕಾರಿಯಾಗಿ ಹಬ್ಬದ ವಾತಾವರಣ ಮೂಡುವ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸ್ವೀಪ್‌ಅಡಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು. ನಗರ ಸ್ಥಳೀಯ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚವಾಹಿನಿಯಲ್ಲಿ ಕಡ್ಡಾಯ ಮತದಾನದ ಮಹತ್ವ ಧ್ವನಿವರ್ಧಕಗಳ ಮೂಲಕ ಸಾರಬೇಕು. ಅಲ್ಲದೇ ಎಲ್ಲ ತಾಲೂಕಾ ಕೇಂದ್ರಗಳಲ್ಲಿ ಮತದಾರರ ಮಹತ್ವ ಸಾರಲು ಪಥ ಸಂಚಲನ ನಡೆಸಬೇಕು ಎಂದು ಹೇಳಿದರು.
ಮತದಾನದ ಮಹತ್ವ ಸಾರಲು ಬ್ಯಾನರ್, ಪ್ಲೇಕ್ಸ್ ಅಳವಡಿಸುವ ಜೊತೆಗೆ ಗೋಡೆ ಬರಹದ ಮೂಲಕ ಮತದಾನದ ಮಹತ್ವವದ ಅರಿವು ಮೂಡಿಸಬೇಕು. ಜನತಂತ್ರ ವ್ಯವಸ್ಥೆ ಬಲಪಡಿಸಲು ಜನರು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ತೊಡಗಬೇಕು. ಪ್ರತಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕು ಎಂಬುದು ಚುನಾವಣಾ ಆಯೋಗದ ನಿರ್ದೇಶನವಾಗಿದೆ ಎಂದರು.
ಹೊಸದಾಗಿ ನೋಂದಣಿಯಾದ ಯುವ ಮತದಾರರಿಗೆ ಕಾರ್ಯಕ್ರಮದಂದು ಎಫಿಕ್ ಕಾರ್ಡ್ ವಿತರಿಸಬೇಕು. ತಾಲೂಕಾ ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಿ ರಾಷ್ಟ್ರೀಯ ಮತದಾರರ ದಿನವನ್ನು ಯಶಸ್ವಿಯಾಗಿ ಆಚರಿಸಲು ಅಗತ್ಯ ಇರುವ ಎಲ್ಲ ರೂಪರೇಷೆಗಳನ್ನು ಸಿದ್ದಪಡಿಸಿಕೊಳ್ಳುವಂತೆ ಅಪರ ಜಿಲ್ಲಾಽಕಾರಿಗಳು ನಿರ್ದೇಶನ ನೀಡಿದರು. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮದ ಪೂರ್ವದಲ್ಲಿ ಪಥ ಸಂಚಲನ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವೋಟರ್ ಆಪ್ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನೆನಾಧಿಕಾರಿ ಪುನಿತ್ ಬಿ.ಆರ್, ಪದವಿ ಪೂರ್ವ ಶಿಕ್ಷಣ ಇಲಾಖೇಯ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಗಾಳಿ, ಜಿ.ಪಂ ಸಹಾಯಕ ಯೋಜನಾಽಕಾರಿ ಭೀಮಪ್ಪ ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.