ರಾಷ್ಟ್ರಧ್ವಜ ಗೌರವ ಕೃತಿ ಸಮಿತಿ ಸ್ಥಾಪನೆಗೆ ಒತ್ತಾಯ

6˜spt1
Published on

ಸೋಮವಾರಪೇಟೆ: ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ರಾಷ್ಟ್ರಧ್ವಜ ಗೌರವ ಕೃತಿ ಸಮಿತಿಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಹಿಂದು ಜನ ಜಾಗೃತಿ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.

ರಾಷ್ಟ್ರಧ್ವಜವನ್ನು ಆ.15 ಮತ್ತು ಜ.26 ರಂದು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ, ಅಂದು ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರಧ್ವಜ ರಸ್ತೆಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಪ್ಲಾಸ್ಟಿಕ್‌ನಿಂದ ತಯಾರಿಸಿದ ಧ್ವಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ಬಗ್ಗೆ ತಹಸೀಲ್ದಾರ್ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರಧ್ವಜಕ್ಕೆ ಅವಮಾನವಾಗುವುದನ್ನು ತಡೆಯಲು ಕೃತಿ ಸಮಿತಿ ರಚಿಸಲು ಮತ್ತು ಅದರಲ್ಲಿ ಸಾಮಾಜಿಕ ಸಂಘಟನೆಗಳನ್ನು ಸೇರಿಸಲು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ಇದರಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರಧ್ವಜದಿಂದ ಆಗುವ ಅವಮಾನವನ್ನು ತಡೆಯಲು ವಿವಿಧ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸುವ ಅಪೇಕ್ಷಿತವಿದೆ. ಸಮಿತಿಯು ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ, ಪ್ರಶೋತ್ತರ ಸ್ಪರ್ಧೆಗಳನ್ನು ಆಯೋಜಿಸುವುದು, ಕರಪತ್ರಗಳನ್ನು ವಿತರಿಸುವುದು, ಫ್ಲೆಕ್ಸ್‌ಗಳನ್ನು ಹಾಕುವುದು, ಸ್ಥಳೀಯ ಕೇಬಲ್ ಚಾನಲ್‌ಗಳಲ್ಲಿ ವಿಡಿಯೋಗಳನ್ನು ತೋರಿಸುವುದು. ರಸ್ತೆಗಳಲ್ಲಿ ಬಿದ್ದಿರುವ ರಾಷ್ಟ್ರ ಧ್ವಜಗಳನ್ನು ಸಂಗ್ರಹಿಸುವುದು, ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುತ್ತದೆ. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸಹಕಾರ ಮಾಡಬೇಕಿದೆ. ಈ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪದಾಧಿಕಾರಿಗಳಾದ ಮಂಜುನಾಥ ಆಚಾರ್ಯ, ವಿನೋದ್ ಜರಾಂ, ಎಂ.ಆದಿತ್ಯ, ಮೋಹನ್ ಯಡವನಾಡು, ಎಂ.ಜೆ.ಸಾವಿತ್ರಿ, ದಿನೇಶ್ ಯಡವನಾಡು, ಎ.ಎಲ್.ಸುರೇಶ್, ಚೇತನ್ ಮಾಟ್ನಳ್ಳಿ, ಪ್ರಸಾದ್‌ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net