ರಾಷ್ಟ್ರದ ಶ್ರೀಮಂತ ಸಂಪತ್ತು ಜನಪದ ಕಲೆ

JANAPADA VV
Published on

ಶಿಗ್ಗಾಂವಿ: ಕೋವಿಡ್-19ರಿಂದಾಗಿ ಜನಪದ ಕಲೆಗಳು ಪಾರಂಪರಿಕ ಪ್ರದರ್ಶನದ ಸಾಮಾಜಿಕ ವಾತ್ಸಲ್ಯ ಕಳೆದುಕೊಳ್ಳುತ್ತಿವೆ ಎಂದು ಕರ್ನಾಟಕ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ದುರ್ಗಾದಾಸ ಕೆ. ಆರ್. ಹೇಳಿದರು.
ಶಿಗ್ಗಾಂವಿಯ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಹಾಗೂ ಗೊಟಗೋಡಿಯ ಜಾನಪದ ವಿವಿ ಜನಪದ ಸಾಹಿತ್ಯ ವಿಭಾಗದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ಕಲಾವಿದರು ಹೆಚ್ಚು ತಲ್ಲಣ, ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಪ್ರದರ್ಶನಗಳು ಸಹ ಬದಲಾಗಿವೆ’ ಎಂದರು.
ಆಧುನಿಕ ತಂತ್ರಜ್ಞಾನಗಳ ಮೂಲಕ ಒಂದಿಷ್ಟು ಪ್ರದರ್ಶನಗಳು ನಡೆಯುತ್ತಿವೆ. ಈ ತಾಂತ್ರಿಕ ಕ್ಷೇತ್ರದ ಬಗ್ಗೆ ಬಹಳ ಜನ ಕಲಾವಿದರಿಗೆ ಗೊತ್ತಿಲ್ಲ. ಶಿಕ್ಷಣ ಪಡೆದ ಕಲಾವಿದರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ತಂತ್ರಜ್ಞಾನ ಗೊತ್ತಿರದ ದೊಡ್ಡ ಕಲಾ ವರ್ಗ ನಮ್ಮಲ್ಲಿದೆ. ಇವರು ತೀವ್ರವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಹೆಚ್ಚಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. ಪ್ರದರ್ಶನಗಳಿಂದ ದೂರ ಉಳಿಯುತ್ತಿದ್ದಾರೆ. ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪೊ›. ಡಿ.ಬಿ. ನಾಯಕ ಮಾತನಾಡಿ, ‘ಜನರಿಂದ ಜನರಿಗೋಸ್ಕರ ಇರುವ ಕಲೆಗಳೆಂದರೆ ಜನಪದ ಕಲೆಗಳು. ಇವು ನಮ್ಮ ರಾಷ್ಟ್ರದ ಶ್ರೀಮಂತ ಸಂಪತ್ತು. ಕೋವಿಡ್-19 ಬಂದ ನಂತರ ಕಲಾವಿದರು ತತ್ತರಿಸಿ ಹೋಗಿದ್ದಾರೆ. ಕಲಾವಿದರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಜನಪದ ಕಲಾವಿದರ ಪೋಷಣೆ ನಮ್ಮ ರಾಷ್ಟ್ರೀಯ ಸಾಂಸ್ಕೃತಿಕ ಕಾಳಜಿ ಆಗಬೇಕು’ ಎಂದರು.
ಎಸ್.ಆರ್.ಜೆ.ವಿ. ಕಾಲೇಜ್​ನ ಪಾಚಾರ್ಯ ಪ್ರೊ. ಸಿ. ಎಚ್. ತಾವರಗೊಂದಿ ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ. ಶ್ರಿಶೈಲ ಹುದ್ದಾರ, ಡಾ. ಚಂದ್ರಪ್ಪ ಸೊಬಟಿ, ಜಾನಪದ ಆಕಾಡೆಮಿ ಸದಸ್ಯ ಶಂಕರ ಅರ್ಕಸಾಲಿ, ಡಾ. ವಿನಯ ಎಚ್.ಕೆ., ಬಸವರಾಜ ಶಿಗ್ಗಾವಿ, ಡಾ. ಸುಮಂಗಲಾ ಅತ್ತಿಗೇರಿ, ಡಾ. ವಿ. ಸಿ. ಕಟ್ಟೆಪ್ಪನವರ ಇತರರಿದ್ದರು.

ಇಂದು ವೃತ್ತಿ ಜನಪದ ಕಲೆಗಳು ಹೆಚ್ಚಾಗಿ ಮಾಯವಾಗುತ್ತಿವೆ. ಧಾರ್ವಿುಕ ಕಲೆಗಳು ಮಾತ್ರ ಉಳಿದುಕೊಂಡಿವೆ. ಹೀಗೆ ವೃತ್ತಿಕಲೆಗಳು ಮಾಯವಾಗಿ ನಿರುದ್ಯೋಗ ಹೆಚ್ಚಿಸುತ್ತಿದೆ. ಅಲ್ಲದೆ, ದಲಿತರ ಕಲೆ, ಹಳ್ಳಿಗಾಡಿನ ಕಲೆ, ಶ್ರಮಿಕರ ಕಲೆ ಎನ್ನುವ ಭಾವದಿಂದ ನೋಡುವುದು ಹೆಚ್ಚುತ್ತಿದೆ. ಇದು ಒಳ್ಳೆಯದಲ್ಲ. ಅವು ನಮ್ಮ ನೆಲದ ನಿಜ ಬದುಕಿನ ಕಲೆಗಳು. ಪಾಶ್ಚಿಮಾತ್ಯ ದೇಶಗಳಲ್ಲಿ ಜನಪದ ಕಲೆಗಳನ್ನು ರಾಷ್ಟ್ರೀಯ ಸಂಪತ್ತೆಂದು ಕಾಣುತ್ತಿದ್ದಾರೆ. ಇಂತಹ ಭಾವನೆ ನಮ್ಮಲ್ಲಿ ಬರಬೇಕು. ಈ ಭಾವನೆಯ ಜೊತೆಗೆ ಕಲೆಗಳ ಅರ್ಥಪೂರ್ಣವಾದ ಪರಿಷ್ಕರಣೆ ಆಗಬೇಕು. ಆಗ ಕೋವಿಡ್​ನಂತಹ ಸಂದರ್ಭಗಳನ್ನು ಮಟ್ಟಿ ನಿಲ್ಲಲು ಸಾಧ್ಯವಾಗುತ್ತದೆ. | ಪ್ರೊ. ಡಿ.ಬಿ. ನಾಯಕ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net