ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ

15 CRP-1B
Published on

ಚನ್ನರಾಯಪಟ್ಟಣ: ಮಹಾತ್ಮರ ತ್ಯಾಗ, ಬಲಿದಾನದ ಫಲವಾಗಿ ದೇಶವು ಸ್ವಾತಂತ್ರೃಗೊಂಡು ವಿಶ್ವದಲ್ಲೇ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಹಬ್ಬಗಳ ಆಚರಣೆ ಸಮಿತಿಯಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಏಕತೆ, ಸಮಗ್ರತೆ ಕಾಪಾಡಿಕೊಂಡು ದೇಶವನ್ನು ಮುನ್ನಡೆಸುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಂವಿಧಾನದಲ್ಲಿ ನಂಬಿಕೆ ಇಟ್ಟು ಗೌರವ ನೀಡುವುದರೊಂದಿಗೆ ನಮ್ಮ ಕರ್ತವ್ಯ ನಿಭಾಯಿಸಬೇಕಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ದೇಶಕ್ಕಾಗಿ ಏನನ್ನಾದರೂ ಕೊಡುಗೆ ನೀಡುವಲ್ಲಿ ಮುಂದಾಗಬೇಕು ಎಂದು ಹೇಳಿದರು.

ದೇಶವು ಸ್ವಾತಂತ್ರ್ಯ ನಂತರ ಪಂಚವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಿದೆ. ಕೃಷಿ, ಆರೋಗ್ಯ, ಶೈಕ್ಷಣಿಕ, ಚಂದ್ರಯಾನ-3 ದೇಶದ ಹಿರಿಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದೆ ಎಂದರು.

ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಿ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸಿ ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ತಾಲೂಕಿನ ಜೀವ ಬೆಳೆಯಾದ ತೆಂಗು ರೋಗಬಾಧೆಯಿಂದ ಭಾರಿ ಪ್ರಮಾಣದಲ್ಲಿ ಇಳುವರಿ ಕುಂಠಿತವಾಗಿದೆ. ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಅಧಿವೇಶನದಲ್ಲಿ ಧ್ವನಿಯಾಗಿ ರಾಜ್ಯ ಸರ್ಕಾರದ ಗಮನ ಸೆಳೆದು ತೆಂಗು ಪುನಶ್ಚೇತನಕ್ಕೆ ಅನುದಾನ ಕೊಡಿಸಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.

ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಧ್ವಜ ಸಂದೇಶ ನೀಡಿ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ದೇಶ ಬಿಡುಗಡೆ ಹೊಂದಿದ ದಿನವಾಗಿ ಗುರುತಿಸಲು ಆಚರಣೆ ಮಾಡಲಾಗುತ್ತದೆ. ಈ ದಿನದಂದು ದೇಶಭಕ್ತಿಯ ಉತ್ಸಾಹ, ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಯಕರ ಭಾಷಣ ಎಲ್ಲೆಡೆ ಕಂಡುಬರುತ್ತವೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕಾಗಿದೆ. ಸ್ವಾತಂತ್ರೃದ ಜತೆಗೆ ಇಂದು ನಮ್ಮ ಹೊಣೆ, ಜವಾಬ್ದಾರಿಗಳನ್ನು ಅರಿತು ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕಾಗಿದೆ ಎಂದರು.

ಡಿವೈಎಸ್‌ಪಿ.ಎನ್.ಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ಎನ್‌ಎನ್‌ಸಿ ತಂಡ, ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲ ನಡೆಸಿದರು. ಗಣ್ಯರು ತಂಡಗಳಿಗೆ ಗೌರವವಂದನೆ ಸಲ್ಲಿಸಿದರು.

--------------

ಅಂಗವಿಕಲರಿಗೆ ಪರಿಕರಗಳನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಬಿಇಒ ಕಚೇರಿ ಹಿಂಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅಸ್ಫಾ ತಬಸುಮ್, ಸಿ.ವೈ.ಚರಿತಾ, ಎಂ.ಎಲ್.ತೇಜಶ್ರೀಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎನ್.ಕುಮಾರ್, ಎಸ್.ಎನ್.ಸುಕುಮಾರ, ನಾಗರಾಜು, ಜೆ.ಎಂ.ಸುಧಾ, ಯೋಗೇಂದ್ರ ಕುಮಾರ್, ಪುಟ್ಟೇಗೌಡ, ಸಿ.ವಿ.ಸಂಧ್ಯಾ, ಶಶಿಕಲಾ, ಡಾ.ಹರೀಶ್, ಟಿ.ಎನ್.ರಮೇಶ್, ತಸ್ಕೀನ್ ಫಾತಿಮಾ, ಬಿ.ಎಸ್.ರೋಹಿತ್, ವರುಣ್ ಚಕ್ರವರ್ತಿ, ರಘು, ಡಾ.ಪೂರ್ಣಿಮಾ, ಗಿರೀಶ್, ಗೋವಿಂದೇಗೌಡ ಅವರನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಟಣದ ಪೂರ್ಣಚಂದ್ರ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ, ಗೂರಮಾರನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ದ್ವಿತೀಯ ಸ್ಥಾನ, ಮೂರನೇ ಸ್ಥಾನವನ್ನು ವಿವೇಕಾನಂದ ಅಂತಾರಾಷ್ಟ್ರೀಯ ಶಾಲೆ ಪಡೆಯಿತು. ಪಥಸಂಚಲನದಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇಟೆ ಮತ್ತು ನವೋದಯ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗಲಕ್ಕೇರಿ ದ್ವಿತೀಯ, ಎಸ್‌ವಿಜಿ ಪಬ್ಲಿಕ್ ಶಾಲೆ ತೃತೀಯ ಸ್ಥಾನ ಪಡೆಯಿತು. ಪ್ರೌಢಶಾಲಾ ವಿಭಾಗದಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಮತ್ತು ಶಾಲಿನಿ ಅಂತಾರಾಷ್ಟ್ರೀಯ ಶಾಲೆ ಪ್ರಥಮ, ಪೂರ್ಣಚಂದ್ರ ಪಬ್ಲಿಕ್ ಶಾಲೆ ಮತ್ತು ರಾಧಾಕೃಷ್ಣ ಅಂತಾರಾಷ್ಟ್ರೀಯ ಶಾಲೆ ದ್ವಿತೀಯ, ಬಿಜಿಎಸ್ ಪಬ್ಲಿಕ್ ಶಾಲೆ ಮೂರನೇ ಸ್ಥಾನ ಪಡೆಯಿತು.

ಪಟ್ಟಣದ ಕಲಾ ಪರಿವಾರದ 200 ಹೆಚ್ಚು ಮಂದಿ ಮಹಿಳಾ ಸದಸ್ಯರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಪುರಸಭೆ ಅಧ್ಯಕ್ಷ ಸಿ.ಎನ್.ಮೋಹನ್, ಉಪಾಧ್ಯಕ್ಷ ಕವಿತಾ ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್, ಸದಸ್ಯರಾದ ರಾಣಿಕೃಷ್ಣ, ರೇಖಾ ಅನಿಲ್, ಬನಶಂಕರಿ ರಘು, ಲಕ್ಷ್ಮಮ್ಮ, ರಾಧಾ ಮಂಜುನಾಥ್, ಸುಜಾತಾ, ನವೀನ್ ಕುಮಾರ್, ರಾಮಕೃಷ್ಣ, ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್.ಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಆರ್.ಅನಿಲ್ ಕುಮಾರ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ್‌ಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಎನ್.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಮಂಜುನಾಥ, ಕಸಾಪ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್, ಬಿಇಒ ಎಚ್.ಎನ್.ದೀಪಾ, ಬಿಆರ್‌ಸಿ ಕೆ.ಎನ್.ಅನಿಲ್, ಸಿಡಿಪಿಒ ಇಂದ್ರ, ದೈಹಿಕ ಶಿಕ್ಷಣ ಪರಿವೀಕ್ಷಕ ಆನಂದ್, ತಾಲೂಕು ಪಂಚಾಯಿತಿ ಸಿಇಒ ಜಿ.ಆರ್.ಹರೀಶ್, ನಗರ ಠಾಣೆ ವೃತ್ತ ನಿರೀಕ್ಷಕ ರಘುಪತಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net