

ಬಾಗಲಕೋಟೆ: ಡಿಎಸ್ಪಿ ಹಾಗೂ ಎಡಿಜಿಪಿ ಹೆಸರಿನಲ್ಲಿ ಫೋನ್ ಮಾಡಿ ಸ್ವಾಮೀಜಿ ಒಬ್ಬರಿಗೆ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿ ಭರ್ತಿ ಒಂದು ಕೋಟಿ ರೂ. ಪೀಕಿದ್ದ ಆರೋಪಿಯನ್ನು ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.
ಜಿಲ್ಲೆಯ ಮುಧೋಳ ತಾಲೂಕು ಮೂಲದ ಪ್ರಕಾಶ ಮುಧೋಳ ವಂಚಕ ಆರೋಪಿಯಾಗಿದ್ದು, ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮದ ಬಳಿ ಇರುವ ರಾಮಾರೂಢ ಮಠದ ೬೩ ವಯಸ್ಸಿನ ಪರಮರಾಮಾರೂಢ ಸ್ವಾಮೀಜಿ ಅವರಿಂದ ಹಣ ಪಡೆದಿದ್ದ ಆರೋಪಿ.
ಸೆಪ್ಟಂಬರ್ ೧೫ ರಂದು ಆರೋಪಿ ಪ್ರಕಾಶ ಮುಧೋಳ ತಾನು ಡಿಎಸ್ಪಿ ಸತೀಶ ಎಂದು ಸುಳ್ಳು ಹೇಳಿ ಸ್ವಾಮೀಜಿಗೆ ಪೋನ್ ಮಾಡಿದ್ದ. ನಿಮ್ಮ ಮೇಲೆ ಬೆಂಗಳೂರ ಹೋಮ್ ಮಿನಿಸ್ಟರ್ ಕಚೇರಿಯಿಂದ ನಮ್ಮ ಆಫೀಸ್ ಗೆ ಸಾಕಷ್ಟು ಪ್ರಕರಣ ಬಂದಿವೆ. ಅವುಗಳ ವಿಚಾರಣೆ ಮಾಡಬೇಕು ಎಂದು ಹೇಳಿ, ಸ್ವಾಮೀಜಿಗೆ ಅವಾಚ್ಯವಾಗಿ ಬೈದು, ಏನು ಈ ರೀತಿ ಮಾಡಿದ್ದಿಯಾ? ನಿನಗೆ ಜೀವನ ಪರ್ಯಂತ ಜೈಲು ಗತಿ ಕಾಣಿಸುತ್ತೇವೆ. ಹಾಗೂ ಮಠದ ಮಾನ ಮರ್ಯಾದೆ ಕಳೆಯುತ್ತೇವೆ ಎಂದು ಹೆಸರಿಸಿದ್ದಾನೆ.
ನಿನ್ನ ಮೇಲಿನ ಕೇಸ್ ಗಳನ್ನು ಕ್ಲೋಸ್ ಮಾಡಲು ನಮ್ಮ ಎಡಿಜಿಪಿ ಸಾಹೇಬರಿಗೆ ಹಣಕೊಡಬೇಕು. ಇಲ್ಲವಾದರೆ ನಿನ್ನ ಖಲಾಸ್ ಮಾಡುತ್ತೇವೆ ಎಂದು ಹೇಳಿ, ಒಂದು ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ಎಡಿಜಿಪಿ ಎಂದು ಮತ್ತೆ ಸುಳ್ಳು ಹೇಳಿ ಮತ್ತೊಂದು ಮೊಬೈಲ್ ನಿಂದ ಸ್ವಾಮೀಜಿ ಕರೆ ಮಾಡಿ ಮತ್ತೆ ಅವಾಚ್ಯವಾಗಿ ಬೈದು, ಹಣ ಕೊಡದೇ ಇದ್ದರೆ ನಿನ್ನ ಹಾಗೂ ಮಠದ ಮರ್ಯಾದೆ ಹರಾಜ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಪೊಲೀಸ್ ಅಧಿಕಾರಿಗಳೇ ಮಾತನಾಡಿದ್ದಾರೆಂದು ಆತಂಕಗೊಂಡ ಸ್ವಾಮೀಜಿ, ಸೆಪ್ಟಂಬರ್ ೧೬ ರಂದು ಬೆಳಗ್ಗೆ ಬೆಂಗಳೂರ ವಿಧಾನಸೌದದ ಹತ್ತಿರ ೬೧ ಲಕ್ಷ ರೂ. ಹಾಗೂ ಎರಡು ಖಾಲಿ ಚೆಕ್ ಪಡೆದುಕೊಂಡು, ಕೆಲ ದಾಖಲೆಗಳಿಗೆ ಶ್ರೀಗಳಿಂದ ಸಹಿ ಮಾಡಿಸಿಕೊಂಡಿದ್ದಾರೆ. ಮತ್ತೆ ಸೆಪ್ಟಂಬರ್ ೨೦ ರಂದು ಮಧ್ಯರಾತ್ರಿ ಸ್ವಾಮೀಜಿ ಹುಬ್ಬಳ್ಳಿಯ ಈದ್ಗಾ ಮೈದಾನದ ಹತ್ತಿರ ಹೋಗಿ ಉಳಿದ ೩೧ ಲಕ್ಷ ರೂ. ಕೊಟ್ಟಿದ್ದಾರೆ. ಒಟು ಒಂದು ಕೋಟಿ ರೂ.ಗಳನ್ನು ಶಿವಕುಮಾರ ಮಡ್ಡಿ ಎನ್ನುವವರ ಮೂಲಕ ಆರೋಪಿಗಳಿಗೆ ಕೊಡೆಸಿದ್ದಾರೆ. ಸ್ವಾಮೀಜಿ ಯಾವಾಗ ತಾವು ಹೇಳಿದಷ್ಟು ಹಣ ಕೊಟ್ಟಿದ್ದಾರೋ ಆರೋಪಿಗೆ ಮತ್ತಷ್ಟು ಹಣ ಕೀಳಲು ಪ್ಲಾನ್ ಮಾಡಿದ್ದಾನೆ. ಸೆಪ್ಟಂಬರ್ ೨೫ ರಂದು ಮತ್ತೆ ಪೋನ್ ಮಾಡಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಸ್ವಾಮೀಜಿ ಅವರು ಸೆ. ೨೭ ರಂದು ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಬೆನ್ನು ಹತ್ತಿದ ಪೊಲೀಸರು, ಸ್ವಾಮೀಜಿಗೆ ಕರೆ ಮಾಡಿದ್ದ ಮೊಬೈಲ್ ನಂಬರ್ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಒಂದೇ ದಿನದಲ್ಲಿ ಆರೋಪಿ ಪ್ರಕಾಶನನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಎಎಸ್ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ ಜಿದ್ದಿ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಡಿಎಸ್ಪಿ ಎಂ.ಕೆ.ಗಂಗಲ್, ಸಿಪಿಐ ಎಂ.ನಾಗರಡ್ಡಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಬಂಽಸಿ, ಸ್ವಾಮೀಜಿಯಿಂದ ಪಡೆದಿದ್ದ ಹಣವನ್ನು ವಾಪಸ್ಸು ತೆಗೆದುಕೊಂಡಿದ್ದಾರೆ.
ಆರೋಪಿ ಪ್ರಕಾಶ ಮುಧೋಳ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದವರು ಎನ್ನಲಾಗಿದೆ. ಕೆಲ ವರ್ಷಗಳಿಂದ ಬೆಳವಾಗಿ ಜಿಲ್ಲೆಯ ರಾಮದುರ್ಗದಲ್ಲಿ ಇದ್ದಾನೆ. ಜೆಡಿಎಸ್ ಪಕ್ಷದಲ್ಲಿ ಇರುವ ಪ್ರಕಾಶ್, ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿದ್ದ. ದೊಡ್ಡ ನಾಯಕರ ಜೊತೆ ತೆಗೆಸಿಕೊಂಡ ಪೋಟೋಗಳು ಇವೆ. ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಈಶ್ವರಪ್ಪ ಅವರ ಜೊತೆಗಿನ ಪೋಟೋಗಳು ಇವೆ. ಸೆ.೨೬ ರಂದು ಬಾಗಲಕೋಟೆಯಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಆಗಮಿಸಿದ್ದ ನಿಖಿಲ ಕುಮಾರಸ್ವಾಮಿ ಜೊತೆ ವೇದಿಕೆಯಲ್ಲಿ ಮಿಂಚುತ್ತಿದ್ದ. ಇದೀಗ ಸ್ವಾಮೀಜಿಗೆ ಪೊಲೀಸ್ ಅಧಿಕಾರಿ ಎಂದು ಸುಳ್ಳು ಹೇಳಿ ಮೋಸ ಮಾಡಿದ್ದಕ್ಕೆ ಪೊಲೀಸ್ ಬಲೆಗೆ ಬಿದ್ದಿದ್ದಾನೆ.