ರಾಮಕೃಷ್ಣ ಹೆಗಡೆ ಹೆಸರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿ

29SIRSI1
Published on

ಶಿರಸಿ: ಮೌಲ್ಯಾಧಾರಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ 97ನೇ ಜನ್ಮದಿನವನ್ನು ಪಟ್ಟಣದಲ್ಲಿ ಸೋಮವಾರ ಆಚರಿಸಲಾಯಿತು.
ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ಅಭಿಮಾನಿಗಳಿಂದ ಯಲ್ಲಾಪುರ ನಾಕಾ ಸಮೀಪ ಇರುವ ರಾಮಕೃಷ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಅಭಿವೃದ್ಧಿ ವಿಕೇಂದ್ರೀಕರಣ ಉಪಾಧ್ಯಕ್ಷ ಪ್ರಮೋದ ಹೆಗಡೆ, ‘ದೂರದೃಷ್ಟಿಯ ರಾಜಕಾರಣಿಯಾಗಿದ್ದ ಹೆಗಡೆಯವರು ತೋಳ್ಬಲ, ಹಣಬಲದಿಂದ ಭಾರತದ ಪ್ರಜಾಪ್ರಭುತ್ವ ಪಾರಾಗಬೇಕು ಎಂದು ಚಿಂತಿಸಿದ್ದರು. ಸರ್ಕಾರ ಏಳು ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲು ಮುಂದಾಗಿದ್ದು ಅದರಲ್ಲಿ ಉತ್ತರ ಕನ್ನಡದಲ್ಲಿ ರಾಮಕೃಷ್ಣ ಹೆಗಡೆ ಹೆಸರಿನ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ಹೆಗಡೆಯವರು ಜಿಲ್ಲೆಯ ಹೆಮ್ಮೆಯ ಪುತ್ರ. ಅವರು ವಿಕೇಂದ್ರೀಕರಣ ವ್ಯವಸ್ಥೆ ಸೇರಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು. ಆದರೆ, ಇಂದು ಯಾವ ರಾಜಕಾರಣಿಯೂ ರಾಮಕೃಷ್ಣ ಹೆಗಡೆ ಅವರ ಯೋಜನೆ ಸ್ಮರಿಸುತ್ತಿಲ್ಲ. ಅವರಿಂದ ರಾಜಕೀಯದಲ್ಲಿ ಮೇಲಕ್ಕೆ ಬಂದವರು 50ಕ್ಕೂ ಅಧಿಕ ಶಾಸಕರಿದ್ದಾರೆ. ಯಾರೂ ಅವರ ವಿಚಾರಗಳನ್ನು ಇಂದು ದೇಶಕ್ಕೆ ಎಷ್ಟು ಪ್ರಸ್ತುತ ಎಂಬುದನ್ನು ತಿಳಿಸುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಹೆಗಡೆ ಅವರ ಬಗ್ಗೆ, ಅವರ ವಿಚಾರಗಳ ಬಗ್ಗೆ ತಿಳಿಸಲು ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ರಮೇಶ ದುಭಾಶಿ, ವಿ.ಎಂ. ಹೆಗಡೆ ಹಣಗಾರ, ಜಿ.ಎನ್. ಹೆಗಡೆ ಮುರೇಗಾರ, ಮುಖೇಶ ಅಮೀನ್, ಆರ್.ಎಂ. ಹೆಗಡೆ ಹಲಸರಿಗೆ, ಸದಾನಂದ ಭಟ್ಟ, ಸತೀಶ ನಾಯ್ಕ ಮಧುರವಳ್ಳಿ, ರಾಜು ಉಗ್ರಾಣಕರ, ಆರ್.ಡಿ. ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net