ರಾಧಾ, ಕೃಷ್ಣರ ವೇಷ ಧರಿಸಿ ಸಂಭ್ರಮಿಸಿದ ಪುಟಾಣಿಗಳು

23-kkr2.(8-25
Published on

ಕಿಕ್ಕೇರಿ: ಕೃಷ್ಣ ಒಂದು ಜಗದ ಶಕ್ತಿಯಾಗಿದ್ದು, ಶ್ರೀಕೃಷ್ಣ ಪರಮಾತ್ಮನ ಬಾಲ್ಯಲೀಲೆ, ತುಂಟಾಟವನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸವಾಗಬೇಕಿದೆ ಎಂದು ಕೆಪಿಎಸ್ ಎಸ್‌ಡಿಎಂಸಿ ಅಧ್ಯಕ್ಷ ಎನ್.ಕೃಷ್ಣೇಗೌಡ ತಿಳಿಸಿದರು.

ಇಲ್ಲಿನ ಕೆಪಿಎಸ್ ಶಾಲೆಯ ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಧಾ, ಕೃಷ್ಣ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದ್ವಾರಕಾನಂದನ ಕೃಷ್ಣ ದ್ವಾಪರಯುಗದಲ್ಲಿ ಶಿಷ್ಟ ರಕ್ಷಕ, ದುಷ್ಟ ಶಿಕ್ಷಕರಾಗಿ ಅವತರಿಸಿದ. ಇಡೀ ಬ್ರಹ್ಮಾಂಡವನ್ನು ತನ್ನ ಬಾಯಿಯಲ್ಲಿ ತೋರಿಸಿದ. ಸತ್ಯಕ್ಕೆ ಜಯವೆಂದು ಮಹಾಭಾರತದಲ್ಲಿ ತೋರಿಸಿಕೊಟ್ಟ ಗೋಕುಲನಂದ ಎಂದರು.

ಕೃಷ್ಣನ ಬಾಲ್ಯಲೀಲೆಯನ್ನು ಮಕ್ಕಳು ವೇಷಭೂಷಣದಲ್ಲಿ ಪ್ರದರ್ಶಿಸುವಂತಹ ಚಟುವಟಿಕೆ ಧರ್ಮ, ಸಂಸ್ಕೃತಿ ಉಳಿಯಲು ಸಹಕಾರಿ. ಮಕ್ಕಳಿಗೆ ಇಂತಹ ಬೆಳವಣಿಗೆಯಿಂದ ಸದ್ಗುಣದ ಭವಿಷ್ಯದ ಯುವ ಸಂಪತ್ತು ಸೃಷ್ಟಿಯಾಗಲು ಸಾಧ್ಯ. ಮಕ್ಕಳಿಗೆ ಇಂತಹ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನವಾಗಲಿದೆ ಎಂದರು.

ರಾಧಾ, ಕೃಷ್ಣ ವೇಷದಲ್ಲಿ ಆಕರ್ಷಕವಾಗಿ ಮಕ್ಕಳು ಕಂಗೊಳಿಸಿದರು. ಎಲ್ಲ ಮಕ್ಕಳಿಗೆ ಸಿಹಿ ತಿನಿಸು, ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕಿ ಭಾರತಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಜಿ.ಎನ್.ಕುಮಾರಸ್ವಾಮಿ, ಉಪನ್ಯಾಸಕ ಎ.ಎಂ.ಮಂಜುನಾಥ್, ಎನ್.ರವೀಂದ್ರ, ಶ್ರುತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net