ರಾಣಿ ಚೆನ್ನಮ್ಮ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ

bkt-24-7
ಬಾಗಲಕೋಟೆ ನಗರದ ಪ್ರಮುಖ ಬೀದಿಗಳಲ್ಲಿ ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆ ಜರುಗಿತು.
Published on

ಬಾಗಲಕೋಟೆ: ಕಿತ್ತೂರು ಸಂಸ್ಥಾನದಲ್ಲಿ ಶಸ್ತ್ರಾಸ್ತಗಳನ್ನು ಹಿಡಿದು ಬ್ರೀಟಿಷರ ವಿರುದ್ಧ ಹೋರಾಡಿದ ರಾಣಿ ಚೆನ್ನಮ್ಮಾಜಿ ಕೇವಲ ಒಂದೇ ಸಮೂದಾಯಕ್ಕೆ ಸೀಮಿತವಾಗದೇ ಸಮಸ್ತ ನಾರಿ ಕೂಲಕ್ಕೂ ಮತ್ತು ಸಮೂದಾಯಕ್ಕೆ ಮಾದರಿಯಾಗಿದ್ದಾಳೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.

ನವನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಿತ್ತೂರಿನ ಪ್ರಜೆಗಳನ್ನು ತನ್ನ ಮಕ್ಕಳಂತೆ ಕಂಡು, ನಾರಿ ಶಕ್ತಿ ಯಾವ ರೀತಿ ಇರುತ್ತದೆ ಎಂಬುದನ್ನು ಅಂದಿನ ಕಾಲದಲ್ಲಿಯೇ ತೋರಿಸಿಕೊಟ್ಟ ದಿಟ್ಟ ಮಹಿಳೆ ರಾಣಿ ಚೆನ್ನಮ್ಮಾಜಿ. ಇಂತಹ ಮಹಿಳೆಯನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದರು.

ರಾಣಿ ಚೆನ್ನಮ್ಮ ಜಯಂತಿಯನ್ನು ಕಾಟಾಚಾರಕ್ಕೆ ಎಂಬಂತೆ ಕೇವಲ ಐವತ್ತು ಅರವತ್ತು ಜನರೊಂದಿಗೆ ಆಚರಿಸುತ್ತಿರುವುದು ವಿಷಾದನೀಯ. ಎಲ್ಲ ಮಹಿಳೆಯರಿಗೂ ಆದರ್ಶವಾಗಿರುವ ರಾಣಿ ಚೆನ್ನಮ್ಮ ಜಯಂತಿಯನ್ನು ಎಲ್ಲ ಸಮುದಾಯದವರೂ ಸೇರಿ ಅರ್ಥಪೂರ್ಣವಾಗಿ ಆಚರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಇಂದು ಸಾಕಷ್ಟು ಸಂಖ್ಯೆಯ ಮಹಿಳೆಯರು ದೇಶ ಸೇವೆಗೈಯಲು ಸೈನ್ಯವನ್ನು ಸೇರುತ್ತಿದ್ದಾರೆಂದರೆ ಅದಕ್ಕೆ ಕಿತ್ತೂರು ರಾಣಿ ಚೆನ್ನಮ್ಮರಂತಹ ವೀರ ಮಹಿಳೆಯರೇ ಕಾರಣ. ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ರಾಣಿ ಚೆನ್ನಮ್ಮಾಜಿ ಸ್ಪೂರ್ತಿಯಾಗಿದ್ದಾರೆ. ಚೆನ್ನಮ್ಮಾಜಿಯ ತ್ಯಾಗಮಯ ಜೀವನ ಆದರ್ಶ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು.

ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ರಾಜ್ಯದಲ್ಲಿ ಸ್ವಾತ್ಯಂತ್ರದ ಕಿಡಿಯನ್ನು ಹೊತ್ತಿಸಿದ ಮೊದಲ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಾಜಿ. ತೊಟ್ಟಿಲು ತೂಗುವ ಕೈ ಶಸ್ತ್ರಾಸ್ತ್ರವನ್ನೂ ಹಿಡಿಯಬಲ್ಲದು ಎಂದು ತೋರಿಸಿಕೊಟ್ಟವಳು ರಾಣಿ ಚೆನ್ನಮ್ಮ. ಬ್ರಿಟಿಷರ ವಿರುದ್ದ ತನ್ನ ನಾಡಿನ ರಕ್ಷಣೆಗಾಗಿ ಪ್ರಾಣವನ್ನೇ ನೀಡಿದ ರಾಣಿ ಚೆನ್ನಮ್ಮಾಜಿ ಆದರ್ಶ ಗುಣಗಳು ಎಲ್ಲರಲ್ಲಿ ಬರಬೇಕು ಎಂದು ತಿಳಿಸಿದರು.

ಸಾಹಿತಿ ಗಿರಿಜಾ.ಎಸ್.ಪಾಟೀಲ, ಅಪರ ಜಿಲ್ಲಾಕಾರಿ ಪರಶುರಾಮ ಶಿನ್ನಾಳಕರ, ತಹಸೀಲ್ದಾರ ಅಮರೇಶ ಪಮ್ಮಾರ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net