ರಾಣಿ ಚನ್ನಮ್ಮ ವಿವಿ ವಿರುದ್ಧ ಆಕ್ರೋಶ

bkt-14-10
ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಪ್ರಕಾಶ ಪೂಜಾರ, ವಿಭಾಗ ಸಹ ಸಂಚಾಲಕ ಉನ್ನತ್ ಬೇವಿನಕಟ್ಟಿ, ನಗರ ಕಾರ್ಯದರ್ಶಿ ಜ್ಯೋತಿ ಸಜ್ಜನ, ಕಾರ್ಯಕರ್ತರಾದ ಶ್ರೇಯಸ್ ಶೆಟ್ಟಿ, ಸುಹಾಸ್ ಬಡಿಗೇರ, ಸಚಿನ್ ಹಾದಿಮನಿ, ಸ್ವಸ್ತಿಕ ಶೆಟ್ಟಿ, ಹಯವದನ ದೇಸಾಯಿ, ಧೀರಜ್ ವರ್ಣೇಕರ, ಓಂಕಾರ ಪಿ, ಹರ್ಷ ಚಂಡಕ ಮತ್ತಿತರರು ಉಪಸ್ಥಿತರಿದ್ದರು
Published on

ಬಾಗಲಕೋಟೆ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವು ಪರೀಕ್ಷಾ ಫಲಿತಾಂಶ ನಿಗದಿತ ಸಮಯದಲ್ಲಿ ಪ್ರಕಟಿಸಬೇಕು, ವಿದ್ಯಾರ್ಥಿಗಳ ಸಮಸ್ಯೆ ಕೂಡಲೇ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ವಿದ್ಯಾರ್ಥಿಗಳು ರಾಣಿ ಚನ್ನಮ್ಮ ವಿವಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಪ್ರಕಾಶ ಪೂಜಾರ ಮಾತನಾಡಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಶಿಕ್ಷಣದ ಆಲಯಗಳಾಗಬೇಕು. ವಿದ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡುವುದು ವಿಶ್ವವಿದ್ಯಾಲಯಗಳ ಕರ್ತವ್ಯವಾಗಿದೆ. ಆದರೆ ಇತ್ತೀಚಿಗೆ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ ಕಾರಣ ಈ ಕೆಳಕಂಡ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಪದವಿ ಪರೀಕ್ಷೆಯ ಫಲಿತಾಂಶವನ್ನೂ ಪ್ರತಿಬಾರಿಯೂ ತಡವಾಗಿ ಪ್ರಕಟಿಸುತ್ತಿದ್ದು, ನಿಗದಿತ ಸಮಯದ ಒಳಗೆ ಪ್ರಕಟಿಸಬೇಕು,ಪದೇ ಪದೇ ವಿದ್ಯಾರ್ಥಿಗಳ ಪಠ್ಯಕ್ರಮವನ್ನು ಬದಲಾಯಿಸುತ್ತಿದ್ದು, ಇದನ್ನು ಮರುಕಳಿಸದಂತೆ ವಿ.ವಿ ಎಚ್ಚರವಹಿಸಬೇಕು. ಮರುಮೌಲ್ಯಮಾಪನದ ಫಲಿತಾಂಶಗಳು ಪ್ರಕಟವಾದ ನಂತರವೆ ಪರೀಕ್ಷಾ ಅರ್ಜಿಯನ್ನು ತುಂಬಲು ಅವಕಾಶ ನೀಡಬೇಕು. ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ವರ್ಗಾವಣೆ ಪಡೆಯಲು ೫೦೦೦ ರೂ. ಭರಿಸಿಕೊಳ್ಳುತಿದ್ದು ಈ ಮೊತ್ತ ವಿದ್ಯಾರ್ಥಿಗಳಿಗೆ ಹೊರೆ ಆಗುತ್ತದೆ ಕಾರಣ ಮೊದಲು ನಿಗದಿಸಿದ ಶುಲ್ಕ ೧೫೦೦ ರೂ. ಭರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಹ ಸಂಚಾಲಕ ಉನ್ನತ್ ಬೇವಿನಕಟ್ಟಿ, ನಗರ ಕಾರ್ಯದರ್ಶಿ ಜ್ಯೋತಿ ಸಜ್ಜನ, ಕಾರ್ಯಕರ್ತರಾದ ಶ್ರೇಯಸ್ ಶೆಟ್ಟಿ, ಸುಹಾಸ್ ಬಡಿಗೇರ, ಸಚಿನ್ ಹಾದಿಮನಿ, ಸ್ವಸ್ತಿಕ ಶೆಟ್ಟಿ, ಹಯವದನ ದೇಸಾಯಿ, ಧೀರಜ್ ವರ್ಣೇಕರ, ಓಂಕಾರ ಪಿ, ಹರ್ಷ ಚಂಡಕ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net