ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಿ

26 bk-1
Published on

ಬಸವಕಲ್ಯಾಣ : ಕನ್ನಡದ ಹಬ್ಬವಾದ ರಾಜ್ಯೋತ್ಸವವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಎಲ್ಲರ ಸಹಾಯ, ಸಹಕಾರದ ಅಗತ್ಯವಿದೆ. ಕಾರ್ಯಕ್ರಮದಲ್ಲಿ ತಾಲೂಕು ಅಧಿಕಾರಿಗಳು, ಸಿಬ್ಬಂದಿ ಸಕ್ರಿಯ ಮತ್ತು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸಹಾಯಕ ಆಯುಕ್ತ ಪ್ರಕಾಶ ಕುದರಿ ಹೇಳಿದರು.

ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯೋತ್ಸವದ ಸಿದ್ಧತಾ ಸಭೆಯಲ್ಲಿ ಮಾತನಾಡಿ, ರಾಜ್ಯೋತ್ಸವದಲ್ಲಿ ಎಲ್ಲರೂ ಭಾಗವಹಿಸುವಂತೆ ಸುತ್ತೋಲೆ ಹೊರಡಿಸಲು ಆದೇಶಿಸಿದರು. ಸಿದ್ಧತೆ ಸಭೆಯಲ್ಲಿ ಭಾಗವಹಿಸದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಆದೇಶಿಸಿದರು.

ಎಲ್ಲರೂ ಕೂಡಿ ಕನ್ನಡದ ತೇರು ಎಳೆಯಬೇಕಿದೆ. ಹಬ್ಬದಲ್ಲಿ ಅಧಿಕಾರಿಗಳು, ಶಾಲೆ, ಕಾಲೇಜು, ಸಂಘ, ಸಂಸ್ಥೆ ಪದಾಧಿಕಾರಿಗಳು, ಕನ್ನಡ ಸಂಘಟನೆಯ ಪದಾಧಿಕಾರಿಗಳು, ಗಣ್ಯರು ಕೈಜೋಡಿಸಿದರೆ ಹಬ್ಬಕ್ಕೆ ಮತ್ತಷ್ಟು ಮೆರಗು ಬರುತ್ತದೆ ಎಂದರು.

ನಗರದ ಅಂಗಡಿಗಳ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮ ಫಲಕ ಅಳವಡಿಸಲು ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಅಳವಡಿಸದ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು ಎಂದು ನಗರ ಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ಆಯಾ ಇಲಾಖೆಯಿಂದ ಜನರಿಗೆ ದೊರೆಯುವ ಸೌಲಭ್ಯಗಳ ಕುರಿತು ಸ್ತಬ್ಧ ಚಿತ್ರದ ಮೂಲಕ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ತಹಸೀಲ್ದಾರ್ ಶಾಂತಗೌಡ ಬಿರಾದಾರ, ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ ಮಾತನಾಡಿದರು. ಸಿಪಿಐ ಅಲಿಸಾಬ್, ನಗರ ಸಭೆ ಪೌರಾಯುಕ್ತ ಮನೋಜಕುಮಾರ ಕಾಂಬಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net