ರಾಜ್ಯಾದ್ಯಂತ ಅ.೧೬ ರಂದು ಹೋರಾಟ

bkt-8-2
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡರು ಕರ ಪತ್ರ ಬಿಡುಗೊಳಿಸಿದರು.
Published on

ಬಾಗಲಕೋಟೆ: ಸುಪ್ರೀಕೋರ್ಟ್ ಆದೇಶವನ್ನು ಪಾಲನೆ ಮಾಡದೇ ಜಾತಿ ಜನಗಣತಿ ವರದಿ ನೆಪವೊಡ್ಡಿ ಒಳಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಸಡ್ಡೆ ತೋರಿಸುತ್ತಿರುವ ವರ್ತನೆ ಖಂಡಿಸಿ ರಾಜ್ಯಾದ್ಯಂತ ಅ.೧೬ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡರಾದ ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.೧೬ರಂದು ರಾಜ್ಯದ ಪ್ರತಿಯೊಂದು ಜಿಲ್ಲಾಽಕಾರಿಗಳ ಕಚೇರಿ ಎದುರು ಒಳಮೀಸಲಾತಿಗಾಗಿ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಒಳಮೀಸಲಾತಿ ಉಪವರ್ಗೀಕರಿಸಲು ಆಯಾ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ ಎಂಬುದನ್ನು ಸಾಂವಿಧಾನಿಕ ಪೀಠ ತೀರ್ಪು ನೀಡಿದೆ. ಆದರೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿಗಾಗಿ ಚರ್ಚೆ ನಡೆಸದೇ ಜಾತಿ ಜನಗಣತಿ ವರದಿ ಬಿಡುಗಡೆ ನೆಪವೊಡ್ಡಿ ಸುಪ್ರೀಂ ಕೋರ್ಟ್ ನೀಡಿದ ಒಳಮೀಸಲಾತಿ ಜಾರಿಗೆ ಕ್ರಮವಹಿಸದೇ ನ್ಯಾಯಂಗ ನಿಂದನೆಗೆ ಮುಂದಾಗಿದೆ ಎಂದರು.

ನಮ್ಮ ಬೇಡಿಕೆಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳದೇ ಹೋದಲ್ಲಿ ದಲಿತರ ನಡೆ ರಾಜಭವನದ ಕಡೆ ಎಂದು ಹೋರಾಟ ಮಾಡುತ್ತೇವೆ. ಇನ್ನೂ ನ್ಯಾಯಂಗ ನಿಂದನೆ ಪ್ರಕರಣವನ್ನು ಕೂಡ ಸರ್ಕಾರದ ಮುಖ್ಯಮಂತ್ರಿ ಮೇಲೆ ಹಾಕಿ ಹೋರಾಟ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಏನೇ ಬೆಳವಣಿಗೆ ಆದರೂ ತಕ್ಷಣ ಪ್ರತಿಕ್ರಿಯೆ ನೀಡುವ ಪ್ರೀಯಾಂಕ ಖರ್ಗೆ ದಲಿತರಿಗಾಗಿ ಒಳಮೀಸಲಾತಿ ಜಾರಿಗೆ ಕುರಿತು ಇದುವರೆಗೆ ತುಟಿಬಿಟ್ಟಿಲ್ಲ. ಇನ್ನೂ ಮುನಿಯಪ್ಪ ಹಾಗೂ ಆರ್.ಬಿ.ತಿಮ್ಮಾಪುರ ಕೂಡ ದಲಿತರು ಎಂದು ಶಾಸಕರಾದರೂ ಒಳಮೀಸಲಾತಿ ಕುರಿತು ಮುಖ್ಯಮಂತ್ರಿ ಬಳಿ ಧ್ವನಿ ಎತ್ತುತ್ತಿಲ್ಲ. ಇನ್ನೂ ಖರ್ಗೆ ಹೆಗಲ ಮೇಲೆ ಬಂದೂಕು ಇಟ್ಟು ಸಂವಿಧಾನಕ್ಕೆ ಗುಂಡು ಹೊಡೆಯುವ ಕೆಲಸವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ನಮ್ಮ ಸಮುದಾಯದ ಶಾಸಕರು, ಮಂತ್ರಿಗಳು ದಲಿತ ಸಮುದಾಯವನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳ ಜತೆಗೆ ಆರನೇ ಗ್ಯಾರಂಟಿ ಒಳಮೀಸಲಾತಿ ಜಾರಿ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಆದರೆ ನ್ಯಾಯಾಲಯ ಆದೇಶ ಮಾಡಿದ್ದರೂ ಅದನ್ನು ಪಾಲನೆ ಮಾಡುತ್ತಿಲ್ಲ ಸರ್ಕಾರದ ಧೋರಣೆ ಏನು ಎಂದು ಪ್ರಶ್ನಿಸಿದರು.
ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕಲಾಗ್ ಹುದ್ದೆಗಳನ್ನು ತುಂಬಬಾರದು ಎಂಬ ಒತ್ತಾಯದ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲವೇ, ಜನಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್ಸಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಸಲ್ಲದು ಅಪೇಕ್ಸ್ ನ್ಯಾಯಾಲಯ ತೀರ್ಪು ಉಲ್ಲಂಘನೆಯ ಒಳ ಹುನ್ನಾರವನ್ನು ಮುಂದುವರೆಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಸುನೀಲ ಕಂಬೋಗಿ, ಕಾಂತಿಚಂದ್ರ ಜ್ಯೋತಿ, ಹಣಮಂತ ಚಿಮ್ಮಲಗಿ, ಅರುಣ ಲೋಕಾಪುರ, ರಾಯಪ್ಪ ಬೀರಕಬ್ಬಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net