

ಬಾಗಲಕೋಟೆ: ಜನರ ವಿಶ್ವಾಸ ಗಳಿಸಿ, ಜನಪ್ರಿಯವಾದ ಸರ್ಕಾರದ ಕಾರ್ಯಚಟುವಟಿಕೆಗೆ ಅಡಿಗಡಿಗೂ ಅಡ್ಡಿ ಮಾಡುತ್ತಿರುವ ರಾಜ್ಯಪಾಲರ ಕ್ರಮ ರಾಜಕೀಯ ಪ್ರೇರಿತವಾಗಿದ್ದು, ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳನ್ನು ವಾಪಸ್ ಮಾಡಿರುವ ರಾಜ್ಯಪಾಲರ ಕ್ರಮಕ್ಕೆ ವಿಧಾನ ಪರಿಷತ ಶಾಸಕ ಸುನೀಲಗೌಡ ಸೇರಿದಂತೆ ೧೫ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಜಂಟಿ ಪ್ರಕಟಣೆ ನೀಡಿರುವ ಕಾಂಗ್ರೆಸ್ ಶಾಸಕರಾದ ಸುನೀಲಗೌಡ ಪಾಟೀಲ, ಮಂಜುನಾಥ ಭಂಡಾರಿ, ಎಸ್. ರವಿ, ಅನಿಲ ಕುಮಾರ್, ರಾಜೇಂದ್ರ ರಾಜಣ್ಣ, ದಿನೇಶ ಗೂಳಿಗೌಡ, ಚಂದ್ರಶೇಖರ ಪಾಟೀಲ, ಚೆನ್ನರಾಜು, ಮಧು ಮಾದೇಗೌಡ, ಡಾ.ತಿಮ್ಮಯ್ಯ, ರಾಮೋಜಿ ಗೌಡ , ಡಿ. ಟಿ. ಶ್ರೀನಿವಾಸ, ಶರಣಗೌಡ ಪಾಟೀಲ, ಭೀಮರಾವ ಪಾಟೀಲ, ತಿಪ್ಪಣ್ಣಾ ಕಮಕನೂರು ಅವರು ರಾಜ್ಯಪಾಲರ ನಡೆಯ ಬಗ್ಗೆ ಧ್ವನಿ ಎತ್ತಿದ್ದಾರೆ.
ಆಗಸ್ಟ್ ತಿಂಗಳಲ್ಲಿ ರಾಜ್ಯಪಾಲರು ಆರು ಪ್ರಮುಖ ಮಸೂದೆಗಳನ್ನು ಹಿಂತಿರುಗಿಸಿದ್ದಾರೆ. ಒಟ್ಟು ೧೧ ವಿಧೇಯಕಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿ ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಸಾರ್ವಜನಿಕ ಭ್ರಷ್ಟಾಚಾರ ತಡೆ ವಿಧೇಯಕ, ಕರ್ನಾಟಕ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ, ಕರ್ನಾಟಕ ಟೌನ್ ಆಂಡ್ ಕಂಟ್ರೀ ಪ್ಲಾನಿಂಗ್ ವಿಧೇಯಕ, ಕರ್ನಾಟಕ ಶಾಸಕಾಂಗ ಸದಸ್ಯರ ಅನರ್ಹತೆ ತಡೆ ವಿಧೇಯಕ, ಕರ್ನಾಟಕ ಪುರಸಭಗಳು ಮತ್ತು ಇತರೇ ಕೆಲವು ಕಾನೂನು ವಿಧೇಯಕ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ವಿಧೇಯಕ, ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಗದಗ ಬೆಟಗೇರಿ ವ್ಯಾಪಾರ ಸಂಸ್ಕೃತಿ ಪ್ರದರ್ಶನ ಪ್ರಾಽಕಾರ ವಿಧೇಯಕ, ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕಗಳನ್ನು ರಾಜ್ಯಪಾಲರು ಇದುವರೆಗೆ ವಾಪಸ್ ಮಾಡಿದ್ದಾರೆ. ಈ ಕ್ರಮ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಮಸೂದೆಗಳು ಅಂಗೀಕಾರವಾಗಿದ್ದರೂ ಕಾಯಿದೆಯಲ್ಲಿ ಲೋಪದೋಷಗಳಿದ್ದರೆ, ಸ್ಪಷ್ಟನೆ ಕೇಳುವ ಅಽಕಾರ ರಾಜ್ಯಪಾಲರಿಗಿದೆ. ಆದರೆ, ಪ್ರತಿಪಕ್ಷದವರು ವಿರೋಧಿಸಿದ್ದಾರೆ ಎಂಬ ಕಾರಣಕ್ಕೆ ಮಸೂದೆಗಳನ್ನು ವಾಪಸ್ ಕಳಿಸುವುದು ಸರಿಯಾದ ಕ್ರಮವಲ್ಲ. ಇದರಲ್ಲಿ ರಾಜಕೀಯದ ದುರುದ್ದೇಶ ಕಾಣುತ್ತದೆ ಎಂದು ಶಾಸಕರು ಆರೋಪಿಸಿ, ಉಳಿದ ರಾಜ್ಯಗಳಂತೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.