

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿ ಮುಳುಗಿ ಹೋಗಿದೆ. ಇವರಿಂದ ಸರ್ಕಾರ ಐದು ವರ್ಷ ಪೂರ್ಣಗೊಳಿಸಲು ಆಗಲ್ಲ. ಮುಂದಿನ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ ಬಿಜೆಪಿ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೊಬ್ಬ ಪ್ರಮಾಣಿಕ ರಾಜಕಾರಣಿ ಎಂದು ಹೇಳಿಕೊಳ್ಳುತ್ತಿದ್ದರು. ಇದೀಗ ತಮ್ಮ ಪತ್ನಿಯ ಹೆಸರಿನಲ್ಲಿ ಮುಡಾದಲ್ಲಿ ನಿವೇಶನ ಪಡೆದಿರುವ ಹಗರಣದಲ್ಲಿ ಸಿಲುಕಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಹೊಸದಾಗಿ ಕಾಮಗಾರಿಗಳು ನಡೆದಿಲ್ಲ. ಹಿಂದಿನ ನಮ್ಮ ಬಿಜೆಪಿ ಸರ್ಕಾರದಲ್ಲಿ ಆರಂಭಗೊಂಡಿದ್ದ ಕಾಮಗಾರಿಗಳೇ ಈಗಲೂ ನಡೆದಿವೆ. ಸರ್ಕಾರ ಬರೀ ಹಗರಣದಲ್ಲಿ ಮುಳುಗಿದೆ. ಮುಡಾ, ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದು, ಜನರು ಬೇಸರಗೊಂಡಿದ್ದಾರೆ. ಈಗಲೇ ಚುನಾವಣೆ ನಡೆದರೂ ರಾಜ್ಯದಲ್ಲಿ ಬಿಜೆಪಿ ೧೫೦ ಸ್ಥಾನಗಳನ್ನು ಗೆಲ್ಲಲಿದೆ. ಸದ್ಯ ನಮ್ಮ ಎದುರು ತಾಪಂ, ಜಿಪಂ ಚುನಾವಣೆಗಳು ಬರಲಿದ್ದು, ಇದಕ್ಕಾಗಿ ಪಕ್ಷದ ಕಾರ್ಯಕರ್ತರು ತಯಾರಾಗಬೇಕು ಎಂದರು.
ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ೭ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್ ಬಂದಿದೆ. ಸಂಸದ ಪಿ.ಸಿ.ಗದ್ದಿಗೌಡರ ಸತತ ೫ನೇ ಸಲ ದಾಖಲೆಯ ಗೆಲುವು ಪಡೆದಿದ್ದಾರೆ. ಪಕ್ಷದ ಗೆಲುವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ಹೇಳಿದರು.
ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದು ೧೫ ತಿಂಗಳಾದರೂ ಈ ವರೆಗೂ ಒಂದೇ ಒಂದು ರೂಪಾಯಿ ಅನುದಾನವನ್ನು ಕೊಟ್ಟಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷದ ಶಾಸಕರೇ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಯಾವ ರೀತಿ ಹೋಗುತ್ತಿದೆ, ಪ್ರತಿ ನಿಮಗದಲ್ಲಿ ಹಣ ಹೊಡೆದು ತೆಲಂಗಾಣ ಮತ್ತು ಬೇರೆ ಬೇರೆ ರಾಜ್ಯಗಳ ಚುನಾವಣೆ ಮಾಡಿದ್ದಾರೆ. ಈ ಬಗ್ಗೆ ಅಽವೇಶನದಲ್ಲಿ ನಿತ್ಯ ಗಲಾಟೆಗಳು ನಡೆಯುತ್ತಿವೆ. ಅಭಿವೃದ್ಧಿಗೆ ಇರುವ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿ, ಯಾವುದೇ ಕಾಮಗಾರಿಗಳು ಹಣ ಕೊಡುತ್ತಿಲ್ಲ. ಈ ಬಗ್ಗೆ ನಮ್ಮ ಕಾರ್ಯಕರ್ತರು ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸಬೇಕು ಎಂದರು.
ಪಕ್ಷದ ಕಾರ್ಯಕರ್ತರು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ನಮ್ಮ ಗೆಲುವಿಗೆ ಶ್ರಮಿಸುತ್ತಾರೆ. ಈಗ ಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅವರಿಗೆ ಅವಕಾಶ ಕಲ್ಪಿಸಿ, ಗೆಲ್ಲಿಸುವುದು ತಮ್ಮ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಗ್ರಾಮೀಣ ಪ್ರದೇಶದ ಜನರಿಗೆ ಈ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ವಿವಿಧ ನಿಗಮಗಳಿಂದ ಜನರ ದುಡ್ಡು ಲೂಟಿ ಹೊಡೆಯುತ್ತಿರುವ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿದ ಬಿಜೆಪಿಯ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತ್ತಿತರರು ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದಿಸಿದರು. ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು, ಪಕ್ಷ ಸಂಘಟನೆ ಒತ್ತು ಕೊಡುವುದರ ಬಗ್ಗೆ ತಿಳಿಸಿದರು.