ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ; ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪ

MGD 7
Published on

ಮಾಗಡಿ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಹಂಕಾರ, ದುರಾಂಕಾರ, ಬೇಕಾಬಿಟ್ಟಿ ಮಾತುಗಳೇ ಹೆಚ್ಚಾಗಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡು, ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಲೇವಡಿ ಮಾಡಿದರು.

ತಾಲೂಕಿನ ಕೆಂಪಾಪುರದ ಕೆಂಪೇಗೌಡ ವೀರಸಮಾಧಿಗೆ ಗುರುವಾರ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಸ್ಥಿತಿ ಇದೆ. ಎಲ್ಲರೂ ನುಂಗಪ್ಪಗಳೆ ಆಗಿದ್ದಾರೆ. ಜನರು ಮೂಕ ಪ್ರೇಕ್ಷಕರಂತೆ ನೋಡುವಂತಾಗಿದೆ ಎಂದು ಆರೋಪಿಸಿದರು.

ಕಳೆದ ವರ್ಷ ಬಿಬಿಎಂಪಿಯಿಂದ ಕೆಂಪೇಗೌಡ ಜಯಂತಿ ಆಚರಿಸಲಿಲ್ಲ, ಕೆಂಪೇಗೌಡ ಪ್ರಶಸ್ತಿ ನೀಡಲಿಲ್ಲ. ವಿಧಾನಸೌಧದಲ್ಲಿ ಕಳೆದ ವರ್ಷದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೇ ಭಾಗವಹಿಸಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಎಲ್ಲರನ್ನೂ ಆಹ್ವಾನಿಸಿ ಕಾರ್ಯಕ್ರಮ ಮಾಡಲಾಗುತಿತ್ತು. ಆದರೆ, ಈ ಸರ್ಕಾರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲರನ್ನೂ ಆಹ್ವಾನಿಸಿದರೆ ನಾವು ಚಿಕ್ಕವರಾಗುತ್ತೇವೆ ಎಂಬ ಭಾವನೆ ಅವರದ್ದಾಗಿದೆ ಎಂದರು.

ಹೃದಯ ಗೆದ್ದವರು ಜನರ ಡಾಕ್ಟರ್ ಆಗ್ತಾರೆ : ಸತ್ತೆಗಾಲದಿಂದ ಈ ಭಾಗಕ್ಕೆ ಹೇಗೆ ನೀರು ತರುತ್ತಾರೆ ಎಂದು ನನ್ನನ್ನು ಪ್ರಶ್ನಿಸಿದ್ದರು. ನೀರು ತರಲಿಲ್ಲವೇ, ಮಂಚನಬೆಲೆ- ವೈಜಿಗುಡ್ಡ ಜಲಾಶಯಕ್ಕೆ ನೀರು ತರಲು ಸಾಕಷ್ಟು ಕಾಟ ನೀಡಿದರು ಎಂದ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಾವು ಉತ್ತಮ ಕೆಲಸ ಮಾಡಿದ್ದಕ್ಕೆ ನಮ್ಮ ಸಂಸದರನ್ನು ಗೆಲ್ಲಿಸಿದ್ದಾರೆ. ಅವರು ಹೃದಯ ಡಾಕ್ಟರ್ ಆಗಿದ್ದು, ಮುಂದೆ ಜನರ ಡಾಕ್ಟರ್ ಆಗುತ್ತಾರೆ. ಕೆಂಪೇಗೌಡರ ಹಾದಿಯಲ್ಲಿ ನಾಡು ಕಟ್ಟಿ ಅಭಿವೃದ್ಧಿಗೊಳಿಸುತ್ತಾರೆ ಎಂದರು.

ಶಾಸಕರು ಅಹಂಕಾರ ಮಾತನಾಡುವುದನ್ನು ಬಿಟ್ಟು ನೆಲದ ಮೇಲೆ ನಿಂತು, ಕುಳಿತು ಕೆಲಸಮಾಡಲಿ. ಜನ ಏಕೆ ಮತ ನೀಡಿದ್ದಾರೆ ಎಂದು ಗೊತ್ತಿರಲಿ. ತಾಲೂಕಿನಲ್ಲಿ ಬಿಜೆಪಿ ಠೇವಣಿ ಪಡೆಯಲಿ ಎಂದಿದ್ದರು. ಈಗ ಪಡೆಯಲಿಲ್ಲವೇ, ನಮ್ಮ ಪಕ್ಷ ಇಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ಎಲ್ಲ ಕೆಲಸ ಮಾಡಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ವಿರುದ್ಧ ಲೇವಡಿ ಮಾಡಿದರು.

ಇಂದೇ ರಾಜೀನಾಮೆ ನೀಡುವೆ : ಉಸ್ತುವಾರಿ ಸಚಿವರಾಗಿದ್ದವರು, ಸಂಸದರಾಗಿದ್ದವರು, ನೀರಾವರಿ ಸಚಿವರಾಗಿದ್ದವರು ಮೀಸೆ ತಿರುಗಿಸುವರು ಶ್ರೀರಂಗ ಯೋಜನೆಗೆ 70 ಎಕರೆ ಭೂಸ್ವಾಧೀನಗೊಳಿಸಿಕೊಳ್ಳಬೇಕಿತ್ತು. ಆದರೆ, ಒಂದು ಎಕರೆ ಭೂಸ್ವಾಧೀನಗೊಳಿಸಿದರು. ನಾವು 70 ಎಕರೆ ಭೂಸ್ವಾಧೀನಪಡಿಸಿಕೊಂಡು ಪೈಪ್‌ಲೈನ್ ಮಾಡಿಸಿ ಪೂರ್ಣ ಕೆಲಸ ಮುಗಿಸಿ, ಸತ್ತೆಗಾಲದಿಂದ ಪ್ರತಿ ಮನೆಗೂ ನೀರು ಕೊಡುವ ಕೆಲಸ ಮಾಡಿದ್ದೆವು. ಗ್ರಾಪಂಗೊಂದು ಮಾದರಿ ಶಾಲೆ, ಆಸ್ಪತ್ರೆ ಆರಂಭಿಸಿ ರಾಜ್ಯಕ್ಕೆ ಮಾದರಿಯಾಗುವಂತೆ ಮಾಡಲಾಗಿದೆ. ಈ ರೀತಿ ದೇಶದಲ್ಲಿ ಯಾರಾದರೂ ಮಾಡಿದ್ದೇನೆ ಎಂದರೆ ಇಂದೇ ನಾನು ರಾಜೀನಾಮೆ ನೀಡುತ್ತೇನೆ ಎಂದು ಅಶ್ವತ್ಥನಾರಾಯಣ ಸವಾಲು ಹಾಕಿದರು.

ಕೆಂಪಾಪುರ ಅಭಿವೃದ್ಧಿ ಹಿನ್ನಡೆ : ಪ್ರತಿಯೊಬ್ಬ ವ್ಯಕ್ತಿ ಕೆಂಪೇಗೌಡರಮಟ್ಟದಲ್ಲಿ ಬೆಳೆಯಲು ಶಿಕ್ಷಣವೂ ಮುಖ್ಯ. ಸಾಕಷ್ಟು ಅಡೆತಡೆಗಳ ಮಧ್ಯೆ ಕೆಂಪಾಪುರವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಗೊಳಿಸಲು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಭೂಸ್ವಾಧೀನಗೊಳಿಸಲಾಗಿತ್ತು. ಭೂಮಿ ಕೊಟ್ಟವರಿಗೆ ಪರ್ಯಾಯವಾಗಿ 5 ಎಕರೆ ಭೂಸ್ವಾಧೀನಗೊಳಿಸಿ, ಹಕ್ಕು ಪತ್ರ ನೀಡುವ ಕಾರ್ಯಕ್ಕೆ ತಡೆಬಿದ್ದಿದೆ. ಇದರಿಂದ ಕೆಂಪಾಪುರ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಅಶ್ವತ್ಥನಾರಾಯಣ ಆರೋಪಿಸಿದರು. ಬಿಜೆಪಿ ಮುಖಂಡ ಬಜ್ಜಜಯರಾಮು, ರಾಜೇಶ್, ಶ್ರೀಧರ್, ಎಂ.ಆರ್. ರಾಘವೇಂದ್ರ, ಶಿವರಾಮಯ್ಯ, ಉಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net