ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

IMG-20241217-WA0109
Published on

ಗುಂಡ್ಲುಪೇಟೆ: ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತ್ರ ಹೇಳುತ್ತಿದ್ದು ಸಾರ್ವಜನಿಕರಿಗೆ ಅನುಕೂಲವಾಗುವ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ ದಲಿತ ವಿರೋಧಿ ಧೋರಣೆ ಬಗ್ಗೆ ಬಿಜೆಪಿ ಮಂಡಲದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಾದ್ಯಂತ ಅಭಿವೃದ್ಧಿ ಇಲ್ಲವಾಗಿದೆ. ಸರ್ಕಾರದಿಂದ ನಾನಾ ನಿಗಮಗಳ ಮೂಲಕ ಫಲಾನುಭವಿಗಳಿಗೆ ನೀಡಿದ ಅನುದಾನದಲ್ಲಿ ಕೋಟ್ಯಂತರ ರೂ. ಮಾಡಿ ನೆರೆ ರಾಜ್ಯಗಳ ಚುನಾವಣೆಗೆ ಬಳಸಲಾಗಿದೆ. ಬೆಳಗಾವಿಯಲ್ಲಿ ಮೀಸಲಾತಿಗಾಗಿ ಹೋರಾಡುತ್ತಿರುವ ಪಂಚಮಸಾಲಿಗಳ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸುತ್ತಾರೆ. ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಸೇರಿದ ಬಡಕುಟುಂಬದ ಐವರು ಬಾಣಂತಿರು ಮೃತಪಟ್ಟಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಕ್ಷೇತರ ಶಾಸಕರು ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಬೇಗೂರಿನಲ್ಲಿ ಹತ್ತಿ ಮಾರುಕಟ್ಟೆ ಸ್ಥಾಪಿಸಲು ಸರ್ಕಾರದಿಂದ 6 ಕೋಟಿ ರೂ. ಹಾಗೂ ಬೊಮ್ಮನಹಳ್ಳಿ ವಸತಿ ಶಾಲೆಗೆ 18 ಕೋಟಿ ರೂ. ಅನುದಾನ ತಂದಿದ್ದರೆ ಅದನ್ನು ತೋರಿಸಲಿ. ನಿಮ್ಮ ಕ್ರಷರ್‌ಗೆ ಹೋಗುವ ರಸ್ತೆ ಮಾಡಲು ಅನುದಾನ ಇರುತ್ತದೆ. ಆದರೆ, ಬೇರೆಯವರು ಕೇಳಿದರೆ ಅನುದಾನ ಇಲ್ಲ ಎನ್ನುತ್ತಿದ್ದೀರಿ. ಪ್ರಶ್ನೆ ಮಾಡಿದರೆ ಕೇಸ್ ಹಾಕಿಸುತ್ತೀರಿ, ಚಾಮೂಲ್ ಅಂಗಡಿ ತೆರೆಯಲು ಅವಕಾಶ ಇದ್ದರೂ ನಿಮ್ಮ ಸ್ವಂತ ಅಂಗಡಿ ಮಾಡಿಕೊಂಡು ಮಗನ ಹೆಸರಿನಲ್ಲಿ ಸಂಬಳ ಪಡೆಯುತ್ತಿದ್ದಾರೆ. ಸಂಗಮ ಟ್ರಸ್ಟ್ ಹೆಸರಿನಲ್ಲಿ ಭೂಮಿ ಪಡೆದುಕೊಂಡು ಸ್ವಂತಕ್ಕೆ ಬಳಸಿಕೊಳುತ್ತ ಅಪ್ಪ ಮಾಡಿಟ್ಟಿರುವ ಹಣದ ಮದದಿಂದ ವರ್ತಿಸುತ್ತಿದ್ದಾರೆ. ಅಗತಗೌಡನಹಳ್ಳಿ ಕ್ರಷರ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ಅಂಬೇಡ್ಕರ್ ಫೋಟೋ ಒಡೆದು ಹಾಕಿದರೂ ಇವರ ಮೇಲೆ ಕ್ರಮ ಇಲ್ಲ. ದಲಿತರ ಜಮೀನಿನ ಮಧ್ಯೆ ರಸ್ತೆ ಮಾಡುವುದರಲ್ಲಿ ತೋರಿಸುವ ನಿಮ್ಮ ತಾಕತ್ತನ್ನು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದು ತೋರಿಸಿ ಎಂದು ಸವಾಲ್ ಹಾಕಿದರು.

ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷರಾದ ಎನ್.ಮಲ್ಲೇಶ್, ಎಲ್.ಸುರೇಶ್, ರಾಜ್ಯ ಸಮಿತಿಯ ಪ್ರಣಯ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕಮರಹಳ್ಳಿ ರವಿ, ಮಾಜಿ ನಿರ್ದೇಶಕ ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರೇವಣ್ಣ, ಮುಖಂಡರಾದ ನವೀನ್ ಮೌರ್ಯ, ಕಲ್ಲಳ್ಳಿ ಮಹೇಶ್, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net