ರಾಜ್ಯ ಸರ್ಕಾರದ ವಿರುದ್ಧ ದಲಿತರು ಕಿಡಿ

2207Klb03
Published on

ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರವೂ ದಲಿತರಿಗಾಗಿ ಮೀಸಲಿರುವ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿಎಸ್‌ಪಿ)ಯ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿರುವುದು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜಗತ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನೂರಾರು ಜನರು ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ, ದಲಿತ ವಿರೋಧಿ ರಾಜ್ಯ ಸರ್ಕಾರ, ಜಾತಿವಾದಿ ಸಿದ್ದರಾಮಯ್ಯ ಸರ್ಕಾರ, ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡ ಸರ್ಕಾರ, ದಲಿತ ವಿರೋಧಿ, ಜಾತಿವಾದಿ ಕಾಂಗ್ರೆಸ್ ಸರ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಇದೀಗ ಸಾಮಾಜಿಕ ನ್ಯಾಯ ಒದಗಿಸದೆ ದಲಿತರಿಗೆ ಮೀಸಲಿಟ್ಟ ಹಣ ಬೇರೆ ಯೋಜನೆಗಳಿಗೆ ಪಡೆಯುವ ಮೂಲಕ ಮೋಸ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ಮೀಸಲಾಗಿದ್ದ ೩೯,೧೨೧ ಕೋಟಿ ರೂ. ಪೈಕಿ ೧೪,೨೮೨ ಕೋಟಿ ರೂ. ಅನುದಾನ ಗ್ಯಾರಂಟಿಗೆ ಬಳಸಲು ತೀರ್ಮಾನಿಸಿದ್ದು ಸರಿಯಲ್ಲ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮತ ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಇದೀಗ ಸಾಮಾಜಿಕ ನ್ಯಾಯ ಮರೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್‌ಟಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಕಡಿತ, ವಿದೇಶಗಳ ಕಲಿಯುತ್ತಿರುವ ಸಂಶೋಧನಾ ವಿದ್ಯಾರ್ಥಿಗಳ ಸಹಾಯಧನ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದಲ್ಲಿ ನಡೆದ ಶೇ.೪೦ ಮೀರಿದ ಭ್ರಷ್ಟಾಚಾರ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ ಎಂಬುದಕ್ಕೆ ವಾಲ್ಮಿಕಿ ನಿಗಮದ ಹಗರಣವೇ ಸಾಕ್ಷಿಯಾಗಿದೆ. ೨೦೨೩ರಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ೧೧ ಸಾವಿರ ಕೋಟಿ ರೂ. ಅನುದಾನ ಗ್ಯಾರಂಟಿಗೆ ವರ್ಗಾಯಿಸಲಾಗಿತ್ತು. ಪ್ರಸ್ತುತ ಮತ್ತೆ ೧೪ ಸಾವಿರ ಕೋಟಿ ರೂ. ವರ್ಗಾಯಿಸಿಕೊಂಡಿರುವುದು ದಲಿತರಿಗೆ ಮಾಡಿದ ಮಹಾಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಸಮಿತಿಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಆಜಾದಪುರ, ತಾಲೂಕು ಸಂಚಾಲಕ ಕಪೀಲ ಸಿಂಗೆ, ಸುಭಾಷ ಕಲ್ಮೋರೆ, ಮಹೇಶ ಕೋಕಿಲೆ, ಪರಶುರಾಮ ರಾಜಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net