

ಬಾಗಲಕೋಟೆ: ಮಾದಕ ವಸ್ತು ಸಾಗಾಟದಲ್ಲಿ ಸಿಕ್ಕಿ ಬಿದ್ದಿರುವ ಕಾಂಗ್ರೆಸ್ ಮುಖಂಡ ಲಿಂಗರಾಜ ಕಣ್ಣಿ ಇಲ್ಲಿಯವರೆಗೆ ರಾಜ್ಯ ಸರ್ಕಾರದ ರಕ್ಷಣೆಯಿಂದ ಸಿಕ್ಕುಬಿದ್ದಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರ ಜೊತೆಗಿರುವವರೇ ಸಿಕ್ಕಿಬಿದ್ದಿದ್ದಾರೆ. ಅವರ ಸಹಾಯ ಇಲ್ಲದೇ ಮಾದಕ ವಸ್ತು ಸಾಗಾಣೆ ಮಾಡಲು ಸಾಧ್ಯವಿಲ್ಲ ಎಂದರು.
ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವವರಿಗೆ ತಮ್ಮ ಜೊತೆಗಿರುವವರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿರುವುದಿಲ್ಲವೇ? ಗೊತ್ತಿದ್ದು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಿದೆ. ಬಾದಾಮಿಯಲ್ಲೂ ಇದೆ. ಯುವ ಜನತೆಯ ಜತೆಗೆ ಆ ಕುಟುಂಬದ ಸದಸ್ಯರೂ ಸಂಕಷ್ಟ ಎದುರಿಸುತ್ತಿದ್ದಾರೆ. ಮಾದಕ ವಸ್ತುಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಖರ್ಗೆ ಇಲಾಖೆಯ ನರೇಗಾದಡಿ ಹಲವು ಕಡೆ ಅಕ್ರಮ ನಡೆಯುತ್ತಿವೆ. ಜಿಲ್ಲೆಯ ಗಂಜಿಹಾಳದಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಮಾತನಾಡುವುದಿಲ್ಲ ನರೇಗಾದ ಹೊರಗುತ್ತಿಗೆ ಸಿಬ್ಬಂದಿ ಏಳು ತಿಂಗಳಿಂದ ವೇತನ ಇಲ್ಲ ಎಂದರೆ ಕುಟುಂಬ ಸಾಗಿಸುವುದು ಹೇಗೆ ಎಂದು ಪ್ರಶ್ನಿಸಿದರು
ಶಾಸಕ ವಿಜಯಾನಂದ ಕಾಶಪ್ಪನವರ, ಕಾಂಗ್ರೆಸ್ಸಿನ 55 ಜನರ ಶಾಸಕರೊಂದಿಗೆ ಬಿಜೆಪಿಯವರು ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ. ಯಾವ ಶಾಸಕರ ಸಂಪರ್ಕದಲ್ಲಿದ್ದಾರೆ ಎಂದು ಪಟ್ಟಿ ಕೊಡಿ. ಮಾತುಕತೆ ನಡೆಸಲು ಯಾರು ಬಂದಿದ್ದರು ತಿಳಿಸಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಶಾಸಕರು ಸುಳ್ಳು ಹೇಳುತ್ತಿದ್ದಾರೆ. ವಿಜಯಾನಂದ ಅವರ ಹೇಳಿಕೆಗೆ ಅವರ ಪಕ್ಷದ ಸಚಿವ ರಾಜಣ್ಣ, ತಲೆ ಸರಿ ಇಲ್ಲದವರು ಹೇಳಿದ್ದಾರೆ ಎಂದಿದ್ದಾರೆ. ಈ ಹಿಂದೆ ಶಾಸಕ ರವಿಕುಮಾರ ಗಣಿಗ ಅವರೂ ಬಿಜೆಪಿಯವರು ಇಂತಹ ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದಿದ್ದರು. ಅದಕ್ಕೆ ಆ ಶಾಸಕರೇ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದಿದ್ದರು. ಇದರಿಂದ ಸುಳ್ಳು ಹೇಳುತ್ತಿರುವುದು ಸಾಬೀತಾಗಿದೆ ಎಂದರು.
ವಕ್ತಾರ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, ಟೊಯೋಟಾ ಕಾರು ಉತ್ಪಾದನಾ ಘಟಕ, ಇನ್ಪೊಸಿಸ್ ಹೊಸ ಶಾಖೆ ಆಂಧ್ರಪ್ರದೇಶಕ್ಕೆ ಹೋಗಿವೆ. ಉದ್ಯಮಿಗಳನ್ನು ಕರೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರದ ತುತ್ತ ತುದಿಯಲ್ಲಿದೆ. ಸಚಿವ ಖರ್ಗೆ ಅವರಿಗೆ ಸೇರಿದ ಕಲಬುರಗಿ ವಿಭಾಗ ಸಂಪೂರ್ಣವಾಗಿ ಹಿಂದುಳಿದಿದೆ. ಇಷ್ಟು ವರ್ಷಗಳಾದರೂ ಅಭಿವೃದ್ಧಿಯಾಗಿಲ್ಲ. ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮಲ್ಲಯ್ಯ ಮೂಗನೂರಮಠ, ಮುತ್ತು ಉಳ್ಳಾಗಡ್ಡಿ, ಶಿವಾನಂದ ಸುರಪುರ ಇದ್ದರು.