ರಾಜ್ಯ ಸರ್ಕಾರ ಮದ್ಯಪಾನ ನಿಷೇಧಿಸಲಿ

14 skpp1
Published on

ಸಕಲೇಶಪುರ: ರಾಜ್ಯ ಸರ್ಕಾರ ಮದ್ಯಪಾನ ನಿಷೇಧದಂತಹ ಕ್ರಾಂತಿಕಾರಿ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಹೇಳಿದರು.

ಮಹಾತ್ಮಗಾಂಧಿ ಅವರ 156ನೇ ಜಯಂತಿ ಅಂಗವಾಗಿ ಮಂಗಳವಾರ ಪಟ್ಟಣದ ಪುರಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಸಕಲೇಶಪುರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಸ್ಮರಣೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಗಳು ಗಾಂಧಿ ಹೆಸರು ಹೇಳುತ್ತಾ ಅವರ ತತ್ವಗಳನ್ನು ಗಾಳಿಗೆ ತೋರುತ್ತಿವೆ. ಮದ್ಯಪಾನ ಮಾಡುವುದು ಕುಟುಂಬಕ್ಕೆ, ಸಮಾಜಕ್ಕೆ ಮಾರಕ ಎಂಬುದನ್ನು ಗಾಂಧೀಜಿ ಅಂದೇ ಪ್ರತಿಪಾದಿಸಿದ್ದರು. ಆದರೆ, ಇಂದು ಅಧಿಕಾರದಲ್ಲಿರುವ ಸರ್ಕಾರಗಳು ಅಬಕಾರಿ ಇಲಾಖೆಯಿಂದ ಬರುವ ವರಮಾನಕ್ಕೆ ಅವಲಂಬಿತವಾಗಿವೆ. ಪ್ರತಿ ತಿಂಗಳು ಅಬಕಾರಿ ಇಲಾಖೆಯಿಂದ ವರಮಾನ ಹೆಚ್ಚುವಂತೆ ಮಾಡುವ ಮೂಲಕ ಇಂದು ಪರೋಕ್ಷವಾಗಿ ಜನರನ್ನು ದುಶ್ಚಟಗಳಿಗೆ ದೂಡುವ ಮೂಲಕ ಗಾಂದಿ ತತ್ವಗಳನ್ನು ಮೂಲೆಗುಂಪು ಮಾಡುತ್ತಿವೆ. ಈ ಮಧ್ಯೆ ಧರ್ಮಸ್ಥಳ ಸ್ವಸಹಾಯ ಸಂಘ ಮದ್ಯಪಾನ ಚಟದಿಂದ ಹೊರತರುವ ಕೆಲಸದಲ್ಲಿ ತೊಡಗಿಕೊಂಡಿರವುದು ನಿಜಕ್ಕೂ ಶ್ಲಾಘನೀಯ ಎಂದರು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ದೀರ್ಘಕಾಲ ಬದುಕಬೇಕಾದರೆ ದುಶ್ಚಟಗಳಿಂದ ದೂರ ಇರಬೇಕು. ಇಂದು ಮುಪ್ಪಿಗೂ ಮುನ್ನವೇ ಮರಣ ಹೊಂದುವವರ ಸಂಖ್ಯೆ ಅಧಿಕವಾಗಿದೆ. ದೇಶದಲ್ಲಿ ಶತಾಯುಷಿಗಳ ಸಂಖ್ಯೆ ಕ್ಷೀಣವಾಗಿದೆ. ತಿನ್ನುವ ಆಹಾರದಿಂದ ಹಿಡಿದು ಎಲ್ಲವೂ ವಿಷಮಯವಾಗಿದೆ. ಸ್ವಂತ ಬೆಳೆದ ಆಹಾರ ಸೇವಿಸುವುದರಿಂದ ಮಾತ್ರ ಆರೋಗ್ಯವಾಗಿರಬಹುದು. ಆರೋಗ್ಯವಂತವಾಗಿರುವುದೇ ಅದೃಷ್ಟದ ಲಕ್ಷಣ. ದುಶ್ಚ್ಚಟಗಳು ಮನೆ, ಮನಕ್ಕೆ ಮಾರಕ. ಆದ್ದರಿಂದ ದುಶ್ಚಟಗಳಿಂದ ದೂರ ಇರುವುದು ಉತ್ತಮ ಎಂದರು.

ಮಾದಕವಸ್ತುಗಳು ಹಲವು ಕುಟುಂಬಗಳ ನೆಮ್ಮದಿಯನ್ನೇ ಕದಡಿವೆ. ಆದ್ದರಿಂದ, ದೇಶದಿಂದ ಮಾದಕವಸ್ತುಗಳನ್ನು ಕಿತ್ತೆಸೆಯುವ ಕೆಲಸವಾಗಬೇಕು. ಮಹಿಳೆಯರು ತಮ್ಮ ಕುಟುಂಬ ಸದಸ್ಯರು ಕೆಟ್ಟ ಚಟಗಳ ದಾಸರಾಗದಂತೆ ಕಾಪಾಡುವ ಕೆಲಸ ಮಾಡಬೇಕು ಎಂದರು.

ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್‌ಕುಮಾರ್, ಕಾಂಗ್ರೆಸ್ ಮುಖಂಡ ಮುರಳಿಮೋಹನ್, ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ಹೊನ್ನವಳ್ಳಿ ಸತೀಶ್, ಜಿಲ್ಲಾ ಜನಜಾಗ್ರತಿ ವೇದಿಕೆಯ ಜಿಲ್ಲಾಧ್ಯಕ್ಷ ಡಾ.ನವೀನ್‌ಚಂದ್ರಶೆಟ್ಟಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಗಿರೀಶ್‌ಮಂಜುನಾಥ್, ಚನ್ನವೇಣಿ ಎಂ.ಶೆಟ್ಟಿ, ಜೈಭೀಮ್ ಮಂಜುನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net