

ಬಾಗಲಕೋಟೆ: ರಾಜ್ಯದಲ್ಲಿ ಒಂದು ವರ್ಷದಲ್ಲಿ ಅಭಿವೃದ್ಧಿಗಾಗಿ ಬಳಕೆ ಮಾಡಬೇಕಿದ್ದ ೫೪ ಸಾವಿರ ಕೋಟಿ ರೂ.ಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಗ್ಯಾರಂಟಿಗಳಿಗೆ ಕೊಟ್ಟಿದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಸರ್ಕಾರದ ಆಡಳಿತ ಶೈಲಿಯ ಬಗ್ಗೆ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದೆ. ಅದೇ ಕಾರಣಕ್ಕೆ ಹಾಲಿಗೆ, ನೀರಿಗೆ, ಮೋಟರ್ ವೈಕಲ್‌ಗೆ, ಸ್ಟ್ಯಾಂಪ್ ಪೇಪರ್‌ಗೆ ಪೆಟ್ರೋಲ್, ಡೀಸೆಲ್ ಎಲ್ಲದ್ದಕ್ಕೂ ತೆರಿಗೆ ಹಾಕಿದ್ದಾರೆ, ಇನ್ನೂ ಹಾಕುತ್ತಾರೆ ಸಹ. ಇದರಿಂದ ರಾಜ್ಯ ಸರ್ಕಾರ ಒಂದು ವರ್ಷದಲ್ಲಿ ೪೦ ಸಾವಿರ ಕೋಟಿ ರೂ.ಗಳ ಅಽಕ ತೆರಿಗೆ ಭಾರವನ್ನು ಜನರ ಮೇಲೆ ಹಾಕಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಆರ್ಥಿಕ ಸ್ಥಿತಿ ಎಲ್ಲಿಗೆ ಹೋಗಿದೆ ಎಂದು ವಿಪಕ್ಷಗಳನ್ನು ಬಿಡಿ, ಆಡಳಿತ ಪಕ್ಷದ ಶಾಸಕರೇ ಕಳೆದ ಒಂದು ವರ್ಷದಲ್ಲಿ ರಸ್ತೆಗಳ ಅಭಿವೃದ್ಧಿಗೂ ಹಣ ನೀಡುತ್ತಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿರುವುದೇ ಕಾರಣ. ಹೀಗಾಗಿ ಸಿದ್ದರಾಮಯ್ಯ ಅವರು ಮೊದಲು ತಮ್ಮ ಪಕ್ಷದ ಶಾಸಕರಿಗೆ ಉತ್ತರ ಕೊಡಲಿ ಎಂದು ಸವಾಲ್ ಹಾಕಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ ಸಮರ್ಪಕವಾಗುತ್ತಿಲ್ಲ ಎಂದು ಕಾಂಗ್ರೆಸ್ ನವರ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಈಗಾಗಲೇ ಇದಕ್ಕೆ ಸಂಬAಧಪಟ್ಟAತೆ ಕೇಂದ್ರ ಸಚಿವರು ಉತ್ತರ ನೀಡಿದ್ದಾರೆ. ಅವರ (ಕಾಂಗ್ರೆಸ್) ಕಾಲದಲ್ಲಿ ೧೪ನೇ ಹಣಕಾಸಿನಲ್ಲಿ ಏನು ಬರುತ್ತಿತ್ತು. ಈಗ ೧೫ನೇ ಹಣಕಾಸಿನಲ್ಲಿ ಅದಕ್ಕಿಂತ ಒಂದು ಲಕ್ಷ ಕೋಟಿ ರೂ. ಅನುದಾನ ಬರುತ್ತಿದೆ. ತಮ್ಮ ತಪ್ಪು ಮರೆಮಾಚಲು ಕೇಂದ್ರದ ಕಡೆಗೆ ದೋಷಾರೋಪಣೆ ಮಾಡುವುದು ತಮ್ಮ ತಪ್ಪು ಮುಚ್ಚಿಕೊಳ್ಳಲು ಮಾಡಿರುವಂತದ್ದು. ರಾಜ್ಯದಲ್ಲಿ ಸಂಪೂರ್ಣವಾಗಿ ಹಣಕಾಸಿನ ನಿರ್ವಹಣೆ ಹಾಗೂ ಆಡಳಿತದಲ್ಲಿ ಸರ್ಕಾರ ವಿ-Àಲವಾಗಿದೆ ಎಂದರು.
ರಾಜ್ಯ ಸರ್ಕಾರದಲ್ಲಿ ಡಿನ್ನರ್ ಪಾಲಿಟಿಕ್ಸ್ ಹಾಗೂ ಡಿಕೆಶಿ ಅವರ ದೇವಾಲಯ, ಹೋಮ, ಹವನ ವಿಚಾರವಾಗಿ ಖಾರವಾಗಿ ಉತ್ತರಿಸಿದ ಬಸವರಾಜ್ ಬೊಮ್ಮಾಯಿ, ಲಂಚ್ ಮಾಡುವುದು ಅವರ ಆಂತರಿಕ ವಿಚಾರ. ಆದರೆ, ರಾಜ್ಯ ಇವತ್ತು ಆರ್ಥಿಕ ಸಂಕಷ್ಟದಲ್ಲಿದೆ. ಕಾನೂನು ಸುವ್ಯವಸ್ಥೆ ಜೊತೆಗೆ ದಲಿತರ ಮೇಲೆ ದೌರ್ಜನ್ಯಗಳು, ವಿದ್ಯಾರ್ಥಿಗಳಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ರೈತರಿಗೆ ಪರಿಹಾರ ಬರುತ್ತಿಲ್ಲ. ಬಾಣಂತಿಯರ ಸರಣಿ ಸಾವು ನಡೆದಿದೆ. ಅಗಾಧವಾಗಿ ಸಮಸ್ಯೆಗಳು ಇರುವಾಗ ಇವರಿಗೆ (ಕಾಂಗ್ರೆಸ್) ಎಲ್ಲವನ್ನು ಬಿಟ್ಟು ತಮ್ಮ ರಾಜಕಾರಣವೇ ಮುಖ್ಯವಾಗಿದೆ. ಯಾರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು, ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಬಹಳ ಮಹತ್ವದ್ದಾಗಿದೆ. ಯಾವ ಉದ್ದೇಶಕ್ಕಾಗಿ ಜನರು ಇವರನ್ನು ಗೆಲ್ಲಿಸಿ ಕಳುಹಿಸಿದ್ದರೋ ಅದನ್ನು ಸಂಪೂರ್ಣ ಮರೆತು ತಮ್ಮ ಖುರ್ಚಿಯ ಭದ್ರತೆಯ ಆಟವನ್ನು ಆಡುತ್ತಿದ್ದಾರೆ. ರಾಜ್ಯದ ಜನರ ಸಂಕಷ್ಟ ದೂರ ಮಾಡಲು ಸಂಪೂರ್ಣವಾಗಿ ವಿ-Àಲವಾಗಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಡಿಕೆಶಿ ಅವರು ಹೋಮ, ಹವನ ಮಾಡಿಸುತ್ತಿರುವುದು ಅವರ ವೈಯಕ್ತಿಕ ವಿಚಾರ. ಆದರೆ, ಜನರ ಸಂಕಷ್ಟಕ್ಕೆ ದಾವಿಸಬೇಕಿದ್ದ ಸಮಯದಲ್ಲಿ ಸರ್ಕಾರ, ಮಂತ್ರಿಗಳು ತಮ್ಮ ವೈಯಕ್ತಿಕ ಹಾಗೂ ಖುರ್ಚಿಗಾಗಿ ತಮ್ಮ ರಣ ನೀತಿಗಳನ್ನು ಮಾಡುತ್ತಿದ್ದಾರೆ. ಇದು ನಮ್ಮ ರಾಜ್ಯದ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ಸಿಎಂ ಖುರ್ಚಿ ಅಲಗಾಡುತ್ತಿದೆಯಾ ಎನ್ನುವ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಬೊಮ್ಮಾಯಿ, ಮುಖ್ಯಮಂತ್ರಿ ಆಗುವ ಪಾರಂಭದ ದಿನವೇ ಈ ಪ್ರಕ್ರಿಯೆ ಶುರುವಾಗಿದೆ. ಮೊಳಕೆಯಲ್ಲೆ ಒಡಕಿದೆ, ಹೀಗಾಗಿ ಇದು ಮುಂಬರುವ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಆಗಲಿದೆ ಎಂದು ಭವಿಷ್ಯ ನುಡಿದರು.
ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬಣ ರಾಜಕಾರಣದ ಬಗ್ಗೆ, ನಮ್ಮದೇನು ಬಹಳ ದೊಡ್ಡ ಸಮಸ್ಯೆ ಇಲ್ಲ. ಹೈಕಮಾಂಡ್ ಈಗಾಗಲೇ ಈ ಬಗ್ಗೆ ವಿಚಾರ ಮಾಡಿದೆ. ಕೆಲವೆ ದಿನಗಳಲ್ಲಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುತ್ತದೆ ಎಂದರು.
ಇನ್ನು ಕೆ.ಎಸ್.ಈಶ್ವರಪ್ಪ ಅವರು ಕ್ರಾಂತಿಕಾರಿ ಬ್ರಿಗೇಡ್ ಕಟ್ಟುತ್ತಿರುವ ಬಗ್ಗೆ, ಅದರ ಬಗ್ಗೆಯೂ ನಾವೆಲ್ಲರೂ ಚಿಂತನೆ ಮಾಡುತ್ತೇವೆ ಎಂದರು.