

ಬಾಗಲಕೋಟೆ : ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂಬುದು ನನ್ನ ಹಲವು ವರ್ಷಗಳ ಕನಸು. ಅದು ಇದೀಗ ಈಡೇರುವ ಕಾಲ ಬಂದಿದೆ. ಶೀಘ್ರವೇ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದು ಬಿಟಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎಚ್.ವೈ. ಮೇಟಿ ಹೇಳಿದರು.
ನಗರದ ಮೆಳ್ಳಿಗೇರಿ ವಾಣಿಜ್ಯ ಮಳಿಗೆ ಬಳಿ ಬಾಗಲಕೋಟೆ-ಬಿಳಿಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿ ನಂ.57ರ ಬಾಗಲಕೋಟೆ-ನೀರಲಕೇರಿ ಮಾರ್ಗದ 7.73 ಕಿ.ಮೀ ಹೆದ್ದಾರಿಯನ್ನು 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಾರ್ಷಿಕ 200 ಕೋಟಿ :
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಮಗ್ರ ಯೋಜನಾ ವರದಿ ಸ್ಥಪಡಿಸಲು ಸರ್ಕಾರ ಸೂಚಿಸಿದೆ. ಇದಕ್ಕಾಗಿ ಶೀಘ್ರ ವಿಶೇಷ ಅಧಿಕಾರಿ ಕೂಡ ನೇಮಕಗೊಳ್ಳಲಿದ್ದಾರೆ. ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಜೀವ ಗಾಂಧಿ ಆರೋಗ್ಯ ವಿವಿಯಿಂದ ಪ್ರತಿವರ್ಷ 200 ಕೋಟಿ ಅನುದಾನ ದೊರೆಯಲಿದೆ. ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಈಡೇರಿದೆ ಎಂದರು.
ಕಾಲೇಜು ಸ್ಥಾಪನೆಗೆ ಎಲ್ಲ ರೀತಿಯ ತಯಾರಿ ಕೂಡ ಮಾಡಿಕೊಳ್ಳಲಾಗುವುದು. ಅಗತ್ಯ ಜಾಗ ನೀಡಲು, ಸರ್ಕಾರ ಕೃಷ್ಣಾ ಭಾಗ್ಯ ಜಲ ನಿಗಮಕ್ಕೂ ನಿರ್ದೇಶನ ನೀಡಿದೆ. ಈ ಕುರಿತು ಬಿಟಿಡಿಎ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಂದೇ ಕಡೆ ವಾಣಿಜ್ಯ ಸಂಕೀರ್ಣ :
ಮುಳುಗಡೆಯಿಂದ ಬಾಗಲಕೋಟೆಯ ವ್ಯಾಪಾರ-ವಹಿವಾಟು ಛಿದ್ರಗೊಂಡಿದೆ. ವ್ಯಾಪಾರಸ್ಥರು, ಸೂಕ್ತ ವ್ಯಾಪಾರವಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಒಂದೇ ಜಾಗದಲ್ಲಿ ಎಲ್ಲ ರೀತಿಯ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕಿದೆ. ಇದು ನನ್ನ ಆಶಯ ಕೂಡ ಆಗಿದೆ. ಇದಕ್ಕಾಗಿ ಯುನಿಟ್-3ರಲ್ಲಿ ಸುಮಾರು 200 ಎಕರೆ ಜಾಗೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ, ಅದನ್ನು ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ಉದ್ದೇಶವಿದೆ. ಯೂನಿಟ್-3ರಲ್ಲಿ ಗೃಹ ಬಳಕೆಯ ನಿವೇಶನಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತಿಸಲು ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಹೇಳಿದರು.
ಬಾಗಲಕೋಟೆ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಬಾಗಲಕೋಟೆ-ನೀರಲಕೇರಿ ಮಾರ್ಗದ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿತ್ತು. ಇದಕ್ಕಾಗಿ ಎರಡು ವರ್ಷದಿಂದ ಪ್ರತಯ್ನಿಸಿದ್ದು, ಇದೀಗ ರಾಜ್ಯ ಹೆದ್ದಾರಿ ಪ್ರಾಽಕಾರದಿಂದ 20 ಕೋಟಿ ಅನುದಾನ ಬಿಡುಗಡೆಗಯಾಗಿದ್ದು, ಅಭಿವೃದ್ಧಿ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು, ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದ ಸೂಚಿಸಿದರು.
ಸಂತ್ರಸ್ತರ ಸಮಸ್ಯೆಗೆ ಮುಕ್ತಿ ಸಿಗಲಿ :
ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಬಹಳ ದಿನಗಳ ಬಳಿಕ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸ ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅತ್ಯಂತ ಹತ್ತಿರ ಹಾಗೂ ನೇರ ಸಂಪರ್ಕ ಇರುವ ಶಾಸಕರು, ನಮ್ಮ ಕ್ಷೇತ್ರಕ್ಕೆ ದೊರೆತಿರುವುದು ನಾವು ಭಾಗ್ಯಶಾಲಿಗಳು. ಶಾಸಕ ಮೇಟಿ ಅವರು, ಕ್ಷೇತ್ರದ ಪ್ರಮುಖ ಕೆಲಸಗಳನ್ನು ತಾವು ಹಾಗೂ ಮುಖಂಡ ಹೊಳಬಸು ಶೆಟ್ಟರ ಮೂಲಕ ಮಾಡಿಸುತ್ತಿರುವುದು ಸುತ್ತಾರ್ಯ ಎಂದರು.
ಸಂತ್ರಸ್ತರ ಸಮಸ್ಯೆಗಳಿಗೆ ಶೀಘ್ರ ಮುಕ್ತಿ ಸಿಗಬೇಕು. ಪ್ರತಿವರ್ಷವೂ ಭೂಸ್ವಾಧೀನ ಪರಿಹಾರಧನ ಹೆಚ್ಚುತ್ತಿದ್ದು, ಇದು ಸರ್ಕಾರಕ್ಕೂ ಹೊರೆಯಾಗಲಿದೆ. ಏಕಕಾಲಕ್ಕೆ ಭೂಸ್ವಾಧೀನ ಪೂರ್ಣಗೊಳಿಸಬೇಕು. ಸಂತ್ರಸ್ತರು ಸಧ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಿಲ್ಲಾ ನಡುಗಡ್ಡೆ ಸ್ಥಳಾಂತರಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಸಕರ ಕನಸು ಈಡೇರಿಕೆ :
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಶಾಸಕ ಮೇಟಿ ಅವರು ಕ್ಷೇತ್ರದಲ್ಲಿ ಅತೀ ಮುಖ್ಯವಾದ ನಾಲ್ಕೈ ದು ಕೆಲಸ ಮಾಡಬೇಕೆಂದು ಕನಸು ಕಂಡಿದ್ದರು. ಅವೆಲ್ಲ ಸಧ್ಯ ಈಡೇರುತ್ತಿವೆ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ವ್ಯಾಪಾರಸ್ಥರಿಗೆ ಯೂನಿಟ್-3ರಲ್ಲಿ ಒಂದೇ ಕಡೆ 200 ಎಕರೆ ಜಾಗೆ, ಬಾಗಲಕೋಟೆ-ನೀರಲಕೇರಿ ರಾಜ್ಯ ಹೆದ್ದಾರಿ, ಅಚನೂರ ಕ್ರಾಸ್‌ದಿಂದ ಆಲಮಟ್ಟಿ ವರೆಗೆ ಹೆದ್ದಾರಿ ಅಭಿವೃದ್ಧಿ, ಮುಚಖಂಡಿ ಕೆರೆಗೆ ದೊಡ್ಡ ಪ್ರಮಾಣ ಪೈಪ್ ಅಳವಡಿಸುವ ನೀರು ತುಂಬಿಸುವ ಕಾರ್ಯ ಹೀಗೆ ಹಲವು ಮಹತ್ವದ ಕಾರ್ಯ ಶೀಘ್ರ ಈಡೇರಲಿವೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ದ್ಯಾಮಣ್ಣ ಗಾಳಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕ ಬೇನೂರ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಎಸ್.ಎನ್. ರಾಂಪುರ, ಗ್ರಾಮೀಣ ಬ್ಲಾಕ್‌ನ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಕಮತಗಿ, ಗುತ್ತಿಗೆದಾರ ಚಂದ್ರಕಾAತ ನಾಗರಗೋಜಿ (ಐನಾಪುರ), ಮುಖಂಡರಾದ ರಾಜು ಲಮಾಣಿ, ಹನುಮಂತ ರಾಕುಂಪಿ, ಚಂದ್ರಶೇಖರ ರಾಠೋಡ, ಶ್ರೀನಿವಾಸ ಬಳ್ಳಾರಿ, ವೀರಣ್ಣ ಹುಂಡೇಕಾರ, ಸಿದ್ದಣ್ಣ ಗೋಡಿ, ವಿಜಯ ಕಮತಗಿ, ಮಲ್ಲು ಶಿರೂರ, ಅಂದಾನೆಪ್ಪ ಬ್ಯಾಡಗಿಶೆಟ್ಟರ, ನಿಂಗನಗೌಡ ಪಾಟೀಲ, ಮಲ್ಲಪ್ಪ ಹಾಲವರ, ರಾಜು ಮನ್ನಿಕೇರಿ ಮುಂತಾದವರು ಪಾಲ್ಗೊಂಡಿದ್ದರು.