ರಾಜಕೀಯ ವಿಪ್ಲವ ಶೀಘ್ರ ಸುಖಾಂತ್ಯ

Kodimath SWAMIJI
Published on

ಶಿರಸಿ: ರಾಜ್ಯ ರಾಜಕೀಯದಲ್ಲಿ ಉದ್ಭವಿಸಿರುವ ವಿಪ್ಲವ ಯಾವುದೇ ಬದಲಾವಣೆಯಿಲ್ಲದೆ ಸುಖಾಂತ್ಯ ಕಾಣಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ತಾಲೂಕಿನ ನೇರಲಕಟ್ಟೆ (ಈಚಲಬೆಟ್ಟ) ಗ್ರಾಮದಲ್ಲಿರುವ ಭೂದೇವಿ ದೇವಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ಧಾರ್ವಿುಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀಗಳು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಸ್ವಾತಂತ್ರ್ಯದೆ. ಅದಕ್ಕೆ ಸ್ವಾಮೀಜಿಗಳು ಕೂಡ ಹೊರತಾಗಿಲ್ಲ ಎನ್ನುವ ಮೂಲಕ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ಹೇಳಿಕೆ ನೀಡುತ್ತಿರುವ ಸ್ವಾಮೀಜಿಗಳ ನಡೆಯನ್ನು ಸಮರ್ಥಿಸಿದರು.

ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆಯೊಂದು ಸನ್ಯಾಸಿಯ ಎದುರು ಹಾದು ಓಡಿಹೋಗಿತ್ತು. ಆಗ ಜಿಂಕೆಯ ಬಗ್ಗೆ ಸನ್ಯಾಸಿಯ ಬಳಿ ಬಂದು ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಯದಾಗಿತ್ತು. ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ. ಆದರೆ ಶೀಘ್ರವೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ ಎಂದು ಹೇಳಿದರು.

ನವೆಂಬರ್​ನಿಂದ ಸಂಕ್ರಾಂತಿ ನಡುವೆ ದೇಶ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸುತ್ತದೆ ಎಂದ ಶ್ರೀಗಳು, ಆಗಸ್ಟ್ ಮೂರನೇ ವಾರದಿಂದ ಕೋವಿಡ್-19 ಹಾವಳಿ ಹೆಚ್ಚಲಿದೆ. ರೋಗದಿಂದ ಜನರು ಸಾಯುವುದಿಲ್ಲ. ರೋಗದ ಭಯದಿಂದಲೇ ಸಾಯುವವರ ಸಂಖ್ಯೆ ಹೆಚ್ಚಲಿದೆ. ಜನ ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಮಳೆ, ಗಾಳಿ, ಅಧಿಕವಾಗಲಿದೆ. ಕೆರೆ- ಕಟ್ಟೆಗಳು ಭರ್ತಿಯಾಗಿ, ಜಲಪ್ರಳಯ ಸಂಭವಿಸಲಿದೆ. ಪಂಚಭೂತಗಳಿಂದಲೂ ಈ ವರ್ಷ ತೀವ್ರ ಅನಾಹುತ ಸಂಭವಿಸಲಿದೆ ಎಂದು ಶ್ರೀಗಳು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net