ರಾಜಕೀಯ ಜನ್ಮ ನೀಡಿದ ರಾಮನಗರ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ, ರೈತರ ಕಲ್ಯಾಣಕ್ಕೆ ಶ್ರಮಿಸುವ ಅಭಯ

CPT 01
Published on

ಚನ್ನಪಟ್ಟಣ : ನಾನು ಹುಟ್ಟಿದ್ದು ಹಾಸನ ಜಿಲ್ಲೆಯಾದರೂ, ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆಯ ಜನ. ನೀವು ಆಶೀರ್ವಾದ ಮಾಡಿ ನನ್ನನ್ನು ಬೆಳೆಸಿದ ಕಾರಣ ಇಂದು ದೇಶವೇ ನನ್ನನ್ನು ಗುರುತಿಸುವಂತಾಗಿದೆ. ನಾನು ಎಲ್ಲೇ ಇರಲಿ, ನನ್ನ ಹೃದಯ ಸದಾ ನಿಮ್ಮ ಜತೆ ಇರಲಿದೆ ಎಂದು ಕೇಂದ್ರ ಸೂತನ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಮಹದೇಶ್ವರ ದೇವಸ್ಥಾನದ ಬಳಿ ಇರುವ ಹೌಸಿಂಗ್ ಬೋರ್ಡ್ ಆಟದ ಮೈದಾನದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಹಿಂದೆ ರಾಮನಗರ ಶಾಸಕನಾಗಿದ್ದ ವೇಳೆ ನಿಮ್ಮ ಒತ್ತಾಯ ಹಾಗೂ ಪ್ರೀತಿಗೆ ಮಣಿದು ಚನ್ನಪಟ್ಟಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದೆ. ಚುನಾವಣಾ ಪ್ರಚಾರಕ್ಕೆ ಬರದಿದ್ದರೂ ನೀವುಗಳೇ ಶ್ರಮಿಸಿ ಎರಡು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ. ಅಂತಹುದೇ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಬೇಕಾಯಿತು. ನಿಮ್ಮ ಒಪ್ಪಿಗೆ ಪಡೆದೇ ಮಂಡ್ಯದಿಂದ ಸ್ಪರ್ಧಿಸಿದ ನನ್ನನ್ನು ಅಲ್ಲಿನ ಜನ ಭಾರಿ ಬಹುಮತದಿಂದ ಲೋಕಸಭೆಗೆ ಕಳುಹಿಸಿದರು. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದದಿಂದ ಕೇಂದ್ರದ ಮಂತ್ರಿಯಾಗಿ ದೇಶದ ಸೇವೆ ಸಲ್ಲಿಸುವ ಸೌಭಾಗ್ಯ ಲಭಿಸಿದೆ. ದೆಹಲಿ ಸೇರಿ ಇಡೀ ದೇಶದಲ್ಲಿ ನನ್ನನ್ನು ಗುರುತಿಸಲು ನೀವೇ ಕಾರಣ. ಬದಲಾದ ಪರಿಸ್ಥಿತಿಯಲ್ಲಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು. ಆದರೆ, ನನ್ನ ಹೃದಯದಲ್ಲಿ ಚನ್ನಪಟ್ಟಣ ಸದಾ ಇರುತ್ತದೆ ಎಂದರು.

ಅಭಿವೃದ್ಧಿಗೆ ಶ್ರಮಿಸುವೆ! : ನನ್ನ ಜನರ ಕಷ್ಟ ಗೊತ್ತಿದೆ. ಸಿಕ್ಕಿರುವ ಅವಕಾಶ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಜತೆಗೆ, ರೈತರ ಕಲ್ಯಾಣಕ್ಕೆ ಶ್ರಮಿಸುತ್ತೇನೆ. ಕೃಷಿ ಸಚಿವ ಅಲ್ಲದಿದ್ದರೂ, ದೇವೇಗೌಡರ ಕಾರಣದಿಂದ ಸಚಿವ ಸಂಪುಟದ ಎಲ್ಲರೂ ನನ್ನನ್ನು ಗೌರವಿಸುತ್ತಾರೆ. ಆ ಒಡನಾಟ ಬಳಸಿಕೊಂಡು ನನ್ನ ರಾಜ್ಯದ ಅಭಿವೃದ್ಧಿಗೂ ಕಾರ್ಯನಿರ್ವಹಿಸುತ್ತೇನೆ ಎಂದು ಎಚ್‌ಡಿಕೆ ತಿಳಿಸಿದರು.

ಶಾಸಕ ಸ್ಥಾನ ಸೋಮವಾರಕ್ಕೆ ಕೊನೇ ದಿನ : ಕ್ಷೇತ್ರದ ಶಾಸಕ ಸ್ಥಾನ ಸೋಮವಾರ ನನಗೆ ಕೊನೆಯ ದಿನ. ನನ್ನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದೇನೆ. ಈ ಹಿನ್ನೆಲೆಯಲ್ಲಿ ಆ ಕಾಮಗಾರಿಗಳನ್ನು ನಾನೇ ಉದ್ಘಾಟಿಸಬೇಕೆಂದು ತಾಲೂಕಿನ ಮುಖಂಡರು ಅಪೇಕ್ಷೆಪಟ್ಟ ಕಾರಣ ಈ ಕಾರ್ಯಕ್ರಮವನ್ನು ತರಾತುರಿಯಲ್ಲಿ ಹಮ್ಮಿಕೊಳ್ಳಬೇಕಾಯಿತು. 320 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಪಡೆದೆ ಈ ಕಾರ್ಯಕ್ರಮ ನಡೆಸಲಾಗಿದೆ ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದರು.

ಎಷ್ಟು ಬೇಕಾದರೂ ಅನುದಾನ ತರುವ ಶಕ್ತಿ ನನಗಿತ್ತು. ಆದರೆ, ಕೆಲ ಅಧಿಕಾರಿಗಳು ನನ್ನ ನಿರೀಕ್ಷೆಯಂತೆ ಕೆಲಸ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಚ್ಚರಿಕೆಯಿಂದ ಇರಿ! : ಜಿಲ್ಲೆಯಲ್ಲಿನ ನಮ್ಮ ಎದುರಾಳಿಗಳು ನಮ್ಮನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂಬ ದುರಹಂಕಾರಪಡುತ್ತಿದ್ದರು. ದುಡಿಮೆ ಮಾಡಿದ್ದೇವೆ, ನಮಗೆ ಕೂಲಿ ಕೊಡಿ ಎಂದು ಚುನಾವಣೆಯಲ್ಲಿ ಕೇಳುತ್ತಿದ್ದರು. ಯಾವ ಕ್ಷೇತ್ರಕ್ಕೆ ಯಾವ ದುಡಿಮೆ ನನಗಂತೂ ಗೊತ್ತಿಲ್ಲ. ಜಿಲ್ಲೆಯಲ್ಲಿ ಅವರ ಸಾಕ್ಷಿಗುಡ್ಡೆ ಇರುವುದು ಕನಕಪುರದಲ್ಲಿ ಮಾತ್ರ. ಅವರ ವಕ್ರದೃಷ್ಟಿ ನಮ್ಮ ಚನ್ನಪಟ್ಟಣದ ಮೇಲೆ ಬಿದ್ದಿರುವ ಹಾಗಿದೆ. ಯಾವುದೇ ಕಾರಣಕ್ಕೂ ಅಂತಹ ದುರಂಕಾರಿಗಳಿಗೆ ಎಂದಿಗೂ ಅವಕಾಶ ನೀಡದಿರಿ. ಅವರ ದಬ್ಬಾಳಿಕೆ, ದೌರ್ಜನ್ಯದ ಬಗ್ಗೆ ಎಚ್ಚರಿಕೆ ಇರಲಿ ಎನ್ನುವ ಮೂಲಕ ಡಿ.ಕೆ.ಸುರೇಶ್ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ ಜನರನ್ನು ಅಷ್ಟು ಸುಲಭವಾಗಿ ಎದುರಿಸಿ, ಬೆದರಿಸಲು ಸಾಧ್ಯವಿಲ್ಲ. ಚನ್ನಪಟ್ಟಣಕ್ಕೆ ಮಂಡ್ಯದ ಗಾಳಿ ಇದೆ. ಈ ನೆಲದ ಜನರ ವಿಶ್ವಾಸಪಡಿಯುವುದು ಅಷ್ಟು ಸುಲಭವಲ್ಲ ಎಂದು ಟಾಂಗ್ ನೀಡಿದರು.

ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಅಂತೆಯೇ ಯೋಗೇಶ್ವರ್ ಕೂಡ ಶ್ರಮಿಸಿದ್ದಾರೆ. ಆದರೆ, ನಾವೆಂದಿಗೂ ಜಾಹೀರಾತು ಮೂಲಕ ಪ್ರಚಾರ ಪಡೆದಿಲ್ಲ. ತಾಲೂಕಿನ ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನನ್ನ ಜನರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.

ಬೆಟ್ಟದಷ್ಟು ನಿರೀಕ್ಷೆ ಇದೆ: ಸಂಸದ ಡಾ.ಮಂಜುನಾಥ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ನೀವುಗಳು ಕೇವಲ ಮತಕೊಟ್ಟಿಲ್ಲ, ಪ್ರೀತಿ ಅಭಿಮಾನ ಕೊಟ್ಟಿದ್ದೀರಿ. ನನ್ನ ಗೆಲುವಿನ ಜತೆಗೆ ಮೋದಿಯವರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದು ಸಂತಸವಾಗಿದೆ. ಎರಡು ಬಾರಿ ಸಿಎಂ ಆಗಿದ್ದ ವೇಳೆ ಆರೋಗ್ಯ, ಶಿಕ್ಷಣ ಹಾಗೂ ಕೃಷಿ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಪ್ರಸುತ್ತ ಕೇಂದ್ರ ಸಚಿವರಾದ ಅವರ ಮೇಲೆ ಅಪಾರವಾದ ನಿರೀಕ್ಷೆಯಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಮಾತನಾಡಿ,ಕೆಲತಿಂಗಳ ಹಿಂದೆ ದೇಶ ಹಾಗೂ ರಾಜ್ಯದಲ್ಲಿ ಬೇರೆ ರಾಜಕೀಯ ಸ್ಥಿತಿ ಇತ್ತು. ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಬೇಸತ್ತ ಜನ ನಮ್ಮ ಮೈತ್ರಿಗೆ ಅಭೂತಪೂರ್ವ ಜಯಕೊಟ್ಟಿದ್ದಾರೆ. ಕುಮಾರಸ್ವಾಮಿ ಹಾಗೂ ಡಾ.ಮಂಜುನಾಥ್ ಇಬ್ಬರೂ ಜನಪರ ವ್ಯಕ್ತಿತ್ವದವರು. ಕುಮಾರಸ್ವಾಮಿ ಅವರು ದೇಶದ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸದಿಂದ ಕೇಂದ್ರನಾಯಕರು ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕುಮಾರಸ್ವಾಮಿ ಅವರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು. ಆದರೆ, ಅವರೆಂದೆಂದಿಗೂ ನಮ್ಮ ನಾಯಕರಾಗಿರುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net