

ರಾಣೆಬೆನ್ನೂರ: ನಗರದಲ್ಲಿರುವ ರಾಜಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗಿ ಜನರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಕೂಡಲೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಅರುಣಕುಮಾರ ಪೂಜಾರ, ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಅವರಿಗೆ ಸೂಚಿಸಿದರು.
ನಗರಸಭೆ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಚುನಾಯಿತ ಸದಸ್ಯರ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ ಕಾಲುವೆ ಒತ್ತುವರಿಯಿಂದ ನಗರದಲ್ಲಿ ಬಹಳಷ್ಟು ಸಮಸ್ಯೆ ಎದುರಾಗುತ್ತಿವೆ. ಅಧಿಕಾರಿಗಳು ಈವರೆಗೂ ಅತಿಕ್ರಮಣದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೂಡಲೆ ಕಾಲುವೆ ಒತ್ತುವರಿ ಸರ್ವೆ ಮಾಡಿ, ತಕ್ಷಣದಿಂದಲೇ ತೆರವುಗೊಳಿಸುವ ಕಾರ್ಯ ಮಾಡಬೇಕು. ಮುಂದಿನ ಮಳೆಗಾಲದೊಳಗೆ ಸಂಪೂರ್ಣ ಕೆಲಸ ಮುಗಿಸಬೇಕು. ಯಾರ ಒತ್ತಡಕ್ಕೂ ಮಣಿಯುವುದು ಬೇಡ ಎಂದು ಸೂಚಿಸಿದರು.
ಪ್ರಕಾಶ ಪೂಜಾರ, ರಮೇಶ ಮರಡೆಣ್ಣನವರ ಮಾತನಾಡಿ, ನಿಂಬಾ ಹೋಟೆಲ್ ಪಕ್ಕದಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ವಿುಸಲಾಗುತ್ತಿದೆ. ಮಳೆಗಾಲದಲ್ಲಿ ಇಲ್ಲಿಯೇ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ಕಾರಣ ಜನರಿಗೆ ತೀವ್ರ ತೊಂದರೆ ಎದುರಾಗುತ್ತದೆ. ಇದು ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಆಯುಕ್ತ ಡಾ. ಎನ್. ಮಹಾಂತೇಶ ಮಾತನಾಡಿ, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸರ್ವೆ ಮಾಡಿಸಿ ಅತಿಕ್ರಮ ಜಾಗವನ್ನು ತೆರವುಗೊಳಿಸಲಾಗುವುದು ಎಂದರು.
ಶಾಸಕ ಪೂಜಾರ ಮಾತನಾಡಿ, ಮಾದರ ಹೊಂಡ ಅಭಿವೃದ್ಧಿಪಡಿಸಬೇಕು. ಮುನ್ಸಿಪಲ್ ಮೈದಾನ ಅಭಿವೃದ್ಧಿ ಪಡಿಸುವ ಜತೆಗೆ ಶಾಲೆಯ ಹಳೇ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ವಿುಸಲು ಪ್ರಸ್ತಾವನೆ ಕೊಡಿ. ಸರ್ಕಾರದ ಗಮನಕ್ಕೆ ತಂದು ಅನುದಾನ ತರಲಾಗುವುದು ಎಂದರು.
ಈ ಹಿಂದೆ ರಾಜ ಕಾಲುವೆ ಹೂಳೆತ್ತುವ ಕಾಮಗಾರಿ ಸರಿಯಾಗಿ ನಡೆದಿಲ್ಲ. ನಗರೋತ್ಥಾನ ಕಾಮಗಾರಿಗಳು ಕಳಪೆಯಾಗಿ ನಡೆಯುತ್ತಿವೆ. ಕಾಮಗಾರಿ ಮುಗಿದು ಪರಿಶೀಲನೆ ಮಾಡುವವರೆಗೂ ಗುತ್ತಿಗೆದಾರರಿಗೆ ಬಿಲ್ ಪಾಸು ಮಾಡಬಾರದು. ಅಧಿಕಾರಿಗಳು ಕಾಮಗಾರಿ ನಡೆದಾಗ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.
ಪರಿಸರ ಇಂಜಿನಿಯರ್ ವಿರುದ್ಧ ಆಕ್ರೋಶ: ಪರಿಸರ ಇಂಜಿನಿಯರ್ ಮಂಜುಳಾದೇವಿ ಅವರಲ್ಲಿ ಏನೇ ಸಮಸ್ಯೆ ಹೇಳಿದರೂ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ. ನಗರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಪಾಡುರಂಗ ಗಂಗಾವತಿ, ಮಂಜುಳಾ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು.
ಅರುಣಕುಮಾರ ಮಾತನಾಡಿ, ಅಧಿಕಾರಿಗಳು ಮೊದಲು ಸದಸ್ಯರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು. ಸದಸ್ಯರು ಏನೇ ಸಮಸ್ಯೆ ಹೇಳಿದರೂ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಗರಸಭೆ ಸದಸ್ಯರು, ಎಲ್ಲ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು. ಎಣ್ಣೆ ಗುಂಗಲ್ಲಿ ಗಲಾಟೆ...!
‘ಗುತ್ತಿಗೆದಾರನೊಬ್ಬ ಮದ್ಯ ಸೇವನೆ ಮಾಡಿ ಕಾಮಗಾರಿಯ ಬಿಲ್ ಪಾಸು ಮಾಡುವಂತೆ ಒತ್ತಾಯ ಮಾಡಿದ್ದಾರೆ. ಅವರ ಕಾಮಗಾರಿಯ ಫೈಲ್ ಪೂರ್ಣ ಮಾಹಿತಿಯಿಲ್ಲದ ಕಾರಣ ಸರಿ ಮಾಡಿಕೊಂಡು ಬನ್ನಿ ಎಂದು ಹೇಳಿದ್ದಕ್ಕೆ ನಮ್ಮೊಂದಿಗೆ ಗಲಾಟೆ ಮಾಡಿದರು. ಹೀಗಾದರೆ ಹೇಗೆ ಕೆಲಸ ಮಾಡಬೇಕು’ ಎಂದು ಅಕೌಟೆಂಟ್ ವಾಣಿ ಶಾಸಕರ ಎದುರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅರುಣಕುಮಾರ, ಗೌರವಯುತವಾಗಿ ಬಂದವರಿಗೆ ಸ್ಪಂದಿಸಿ, ಕೆಲಸ ಸರಿಯಿದ್ದರೆ ಬಿಲ್ ಪಾಸು ಮಾಡಿ. ಮದ್ಯ ಸೇವಿಸಿ ಬರುವ ಹಾಗೂ ಇಲ್ಲಸಲ್ಲದ ಗಲಾಟೆ ತೆಗೆಯುವವರ ವಿರುದ್ಧ ಮುಲಾಜಿಲ್ಲದೇ ದೂರು ಕೊಡಿ ಎಂದರು.
ಕಂದಾಯ ಅಧಿಕಾರಿ ತರಾಟೆಗೆ...
ಕರ ವಸೂಲಿಯಲ್ಲಿ ಪ್ರತಿ ವರ್ಷ ಒಂದೂವರೆ ಕೋಟಿ ರೂ.ಯಷ್ಟು ಬಾಕಿ ಉಳಿಸಿಕೊಂಡಿದ್ದೀರಿ. ನಿಮಗೆ ಯಾರದ್ದಾದರೂ ಒತ್ತಡ ಇದೆಯೇ ಎಂದು ಶಾಸಕ ಅರುಣಕುಮಾರ, ಕಂದಾಯ ಅಧಿಕಾರಿ ರಮೇಶ ಸುಣಗಾರ ಅವರನ್ನು ತರಾಟೆಗೆ ತೆಗೆದುಕೊಂಡರು. ಸಭೆಗೆ ತಪ್ಪು ಮಾಹಿತಿ ನೀಡುವುದನ್ನು ಬಿಟ್ಟು ಮುಂದಿನ ಮಾರ್ಚ್ನೊಳಗೆ ಎಲ್ಲ ತೆರಿಗೆ ವಸೂಲಿ ಮಾಡಿ ವರದಿ ನೀಡಬೇಕು ಎಂದು ಸೂಚಿಸಿದರು.