ರಸ್ತೆಗೆ ಬೆಳ್ಳುಳ್ಳಿ ಸುರಿದು ಪ್ರತಿಭಟನೆ

1-RNR-01A
Published on

ರಾಣೆಬೆನ್ನೂರ: ಬೆಳ್ಳುಳ್ಳಿ, ಬೆಲೆ ದಿಢೀರನೆ ಕುಸಿತವಾಗಿರುವುದನ್ನು ಖಂಡಿಸಿ ಭಾನುವಾರ ರೈತರು ಮಾರಾಟಕ್ಕೆ ತಂದಿದ್ದ ಬೆಳ್ಳುಳ್ಳಿಯನ್ನು ಇಲ್ಲಿಯ ಎಪಿಎಂಸಿ ಎದುರಿನ ಹಲಗೇರಿ ವೃತ್ತದಲ್ಲಿ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.

ಅಕ್ಟೋಬರ್, ನವೆಂಬರ್​ನಲ್ಲಿ ಒಂದು ಕ್ವಿಂಟಾಲ್ ಬೆಳ್ಳುಳ್ಳಿ 25 ಸಾವಿರ ರೂ. ವರೆಗೂ ಮಾರಾಟವಾಗಿದೆ. ಕ್ರಮೇಣ ಬೆಲೆ ಕಡಿಮೆಯಾಗುತ್ತ ಬಂತು. ಕಳೆದ ವಾರ ಕ್ವಿಂಟಾಲ್​ಗೆ 8 ಸಾವಿರ ರೂ. ದಿಂದ 10 ಸಾವಿರ ರೂ. ಗೆ ಮಾರಾಟವಾಯಿತು. ಆದರೀಗ ಏಕಾಏಕಿ ಎರಡ್ಮೂರು ಸಾವಿರ ರೂ.ಗೆ ಇಳಿಕೆಯಾಗಿದೆ ಏಕೆ ಎಂದು ಪ್ರಶ್ನಿಸಿದ ಬೆಳ್ಳುಳ್ಳಿ ಬೆಳೆಗಾರರು, ಮಾರಾಟಕ್ಕೆ ತಂದಿದ್ದ 50ಕ್ಕೂ ಅಧಿಕ ಚೀಲಗಳಲ್ಲಿನ ಬೆಳ್ಳುಳ್ಳಿಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಖರೀದಿದಾರರು ಸ್ಥಳೀಯ ರೈತರು ಬೆಳೆದ ಬೆಳ್ಳುಳ್ಳಿಯನ್ನು ಬಿಟ್ಟು ಬೇರೆ ಬೇರೆ ಕಡೆಯಿಂದ ತಂದು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಬೆಲೆ ಕುಸಿತ ಕಾಣುವಂತಾಗಿದೆ ಎಂದು ಆರೋಪಿಸಿ ಖರೀದಿದಾರರು, ಎಪಿಎಂಸಿ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಘೊಷಣೆ ಕೂಗಿದರು.

ಖರೀದಿದಾರರು ಮಾಡಿದ ಎಡವಟ್ಟು: ಸ್ಥಳೀಯ ರೈತರು ತಾವು ಬೆಳೆದ 200ಕ್ಕೂ ಅಧಿಕ ಚೀಲ ಬೆಳ್ಳುಳ್ಳಿಯನ್ನು ಮಾರಾಟಕ್ಕೆ ತಂದಿದ್ದರು. ಹರಾಜಿನಲ್ಲಿ ವಿಜಯಪುರ ಭಾಗದ ಬೆಳ್ಳುಳ್ಳಿ ಕ್ವಿಂಟಾಲ್​ಗೆ 6 ಸಾವಿರ ರೂ. ದಿಂದ 8 ಸಾವಿರ ರೂ. ವರೆಗೂ ಬೆಲೆ ಕೂಗಿದ ಖರೀದಿದಾರರು, ಸ್ಥಳೀಯ ರೈತರ ಬೆಳ್ಳುಳ್ಳಿಗೆ ಎರಡ್ಮೂರು ಸಾವಿರ ರೂ. ಮಾತ್ರ ಕೂಗಿದರು. ಇದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆಗೆ ಮುಂದಾದರು. ಈ ನಡುವೆ ರೈತರು ಹಾಗೂ ಖರೀದಿದಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಸ್ಥಳಕ್ಕೆ ಬಂದ ಎಪಿಎಂಸಿ ಹಿರಿಯ ಮೇಲ್ವಿಚಾರಕ ಪರಮೇಶ ನಾಯ್ಕ ಮಾತನಾಡಿ, ಖರೀದಿದಾರರು ಇಲ್ಲಿರುವ ರೈತರ ಬೆಳ್ಳುಳ್ಳಿಯನ್ನೇ ಖರೀದಿಸಬೇಕು. ಬೇರೆ ಮಾರುಕಟ್ಟೆಯಿಂದ ತಂದು ಮಾರಾಟ ಮಾಡುವಂತಿಲ್ಲ. ಈಗ ತಂದಿರುವುದನ್ನು ವಾಪಸ್ ಕಳುಹಿಸಬೇಕು ಎಂದು ಸೂಚಿಸಿದರು. ಆ ನಂತರ ನಡೆದ ಹರಾಜಿನಲ್ಲಿ ಸ್ಥಳೀಯ ರೈತರ ಬೆಳ್ಳುಳ್ಳಿ 1 ಕ್ವಿಂಟಾಲ್​ಗೆ 5 ಸಾವಿರ ರೂ. ದಿಂದ 7 ಸಾವಿರ ರೂ. ವರೆಗೂ ಬೆಲೆ ದೊರೆಯಿತು. ಆ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.

ರಾಣೆಬೆನ್ನೂರ ತಾಲೂಕಿನ ಯರೇಕುಪ್ಪಿ, ಹಲಗೇರಿ, ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿ, ಹಿರೇಕೆರೂರ ಹಾಗೂ ಬ್ಯಾಡಗಿ ಸೇರಿ ಜಿಲ್ಲೆಯ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿದ್ದರು.

ಮಾಲು ಹೊತ್ತೊಯ್ದ ಜನತೆ: ರೈತರು ಎಪಿಎಂಸಿಯಿಂದ ಬೆಳ್ಳುಳ್ಳಿ ಚೀಲಗಳನ್ನು ಎಳೆದು ತಂದು ರಸ್ತೆಗೆ ಸುರಿದು ಪ್ರತಿಭಟಿಸಿ ಹಿಂದೆ ಸರಿಯುತ್ತಿದ್ದಂತೆ ಸಾರ್ವಜನಿಕರು ಮುಗಿಬಿದ್ದು ಬೆಳ್ಳುಳ್ಳಿಯನ್ನು ಚೀಲದಲ್ಲಿ ತುಂಬಿಕೊಂಡು ಹೋದರು. ಅಷ್ಟೇ ಅಲ್ಲದೇ ಮಾರುಕಟ್ಟೆಯಲ್ಲೂ ಒಣಹಾಕಿದ ಬೆಳ್ಳುಳ್ಳಿಯನ್ನು ಹೊತ್ತೊಯ್ದರು.

ಪೊಲೀಸ್ ಭದ್ರತೆಯಲ್ಲಿದ್ದ ಬೆಳೆ ಬೀದಿಗೆ: ಆಗಸ್ಟ್, ಅಕ್ಟೋಬರ್​ನಲ್ಲಿ ನೆರೆ ಕಾರಣ ಬೆಳ್ಳುಳ್ಳಿ ಬೆಳೆಯ ಇಳುವರಿ ಕುಂಠಿತವಾಗಿತ್ತು. ಹಾಗಾಗಿ ಕ್ವಿಂಟಾಲ್​ಗೆ 25 ಸಾವಿರ ರೂ.ವರೆಗೂ ಬೆಲೆ ಬಂದಿತ್ತು. ಇದರಿಂದಾಗಿ ರಾಣೆಬೆನ್ನೂರ ತಾಲೂಕಿನ ಹಲಗೇರಿ ಭಾಗದಲ್ಲಿ ರಾತ್ರೋರಾತ್ರಿ ಕಳ್ಳತನ ಕೂಡ ಮಾಡಲಾಗಿತ್ತು. ಆಗ ಪೊಲೀಸರು ಬೆಳ್ಳುಳ್ಳಿ ಗುಡ್ಡೆಗಳಿಗೆ (ರಾಶಿ) ಭದ್ರತೆ ಒದಗಿಸಿ ರಾತ್ರಿ-ಹಗಲು ಕಾಯ್ದಿದ್ದರು. ಆದರೀಗ ಅದೇ ಬೆಳ್ಳುಳ್ಳಿ ಸಂಪೂರ್ಣ ಬೆಲೆ ಕಳೆದುಕೊಂಡಿತ್ತು. ಮಾರಾಟಕ್ಕೆ ತಂದಿದ್ದ ಬೆಳ್ಳುಳ್ಳಿಯನ್ನು ರಸ್ತೆ, ತಿಪ್ಪೆಗೆ ಎಸೆಯುವ ದುಸ್ಥಿತಿ ಬಂದೊದಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net